ನವದೆಹಲಿ: ಮೂವರು ಸದಸ್ಯರನ್ನೊಳಗೊಂಡ ಲೋಧಾ ಸಮಿತಿ ಶಿಫಾರಸಿನಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮೊದಲ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(ಸಿಇಒ)ಯಾಗಿ ರಾಹುಲ್ ಜೋಹ್ರಿ ಅವರನ್ನು ಬುಧವಾರ ನೇಮಕ ಮಾಡಿಕೊಳ್ಳಲಾಗಿದೆ.
ರಾಹುಲ್ ಜೋಹ್ರಿ ನೇಮಕಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಇಂದು ಪ್ರಕಟಣೆ ನೀಡಿದ್ದು, ಜೂನ್ 1ರಿಂದ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದೆ.
ಡಿಸ್ಕವರಿ ನೆಟ್ವರ್ಕ್ನ ಏಷ್ಯಾ ಪೆಸಿಫಿಕ್ ಕಾರ್ಯನಿರ್ವಹಣಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರಾಹುಲ್ ಜೋಹ್ರಿ ಅವರು ದಕ್ಷಿಣ ಏಷ್ಯಾದ ಪ್ರಧಾನ ವ್ಯವಸ್ಥಾಪಕರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಜೂನ್ 1ರಿಂದ ಅವರು ಬಿಸಿಸಿಐ ಸಿಇಒ ಆಗಿ ಮುಂಬೈ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್, ರಾಹುಲ್ ಅವರಲ್ಲಿ ಈ ಬಗ್ಗೆ ಮನವಿ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಅವರು ಒಪ್ಪಿಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ತರಲಿಕ್ಕಾಗಿ ಅನುಭವಿ ಅಧಿಕಾರಿಯೊಬ್ಬರ ಅಗತ್ಯತೆ ಬಿಸಿಸಿಐಗೆ ಇತ್ತು ಎಂದಿದ್ದಾರೆ.