ಆಸಿಸ್ ಗೆ ಕಿವೀಸ್ ಶಾಕ್: ನ್ಯೂಜಿಲೆಂಡ್ ಗೆ 8 ರನ್ ಗಳ ರೋಚಕ ಜಯ
ಧರ್ಮಶಾಲಾ: ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿದ್ದ ಭಾರತಕ್ಕೆ ಮೊದಲ ಪಂದ್ಯದಲ್ಲಿಯೇ ಶಾಕ್ ನೀಡಿದ್ದ ನ್ಯೂಜಿಲೆಂಡ್ ತಂಡ ತನ್ನ ಎರಡನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನೂ ಮಣಿಸಿ ಉಪಾಂತ್ಯದ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.
ಶುಕ್ರವಾರ ಧರ್ಮಶಾಲಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ವೇಗಿ ಮಿಚೆಲ್ ಮೆಕ್ಲೀನಘನ್(17ಕ್ಕೆ 3) ಅವರ ಮಾರಕ ಬೌಲಿಂಗ್ ನೆರವಿನಿಂದ 8 ರನ್‌ಗಳ ರೋಚಕ ಜಯ ಸಾಧಿಸಿದೆ. ಮಣಿಸಿದ ಕಿವೀಸ್ ಸತತ 2ನೇ ಗೆಲುವಿನೊಂದಿಗೆ ತನ್ನ ಉಪಾಂತ್ಯ ಹಾದಿ ಸುಗಮಪಡಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ 8 ವಿಕೆಟ್‌ಗೆ 142 ರನ್ ದಾಖಲಿಸಿತು. ಕಿವೀಸ್ ಪರ ಗಪ್ಟಿಲ್ -39 ರನ್ , ಕೇನ್ ವಿಲಿಯಮ್ಸನ್ 24 ರನ್, ಮುನ್ರೋ 23 ರನ್ ಮತ್ತು ಎಲಿಯಟ್ 27 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಫಾಲ್ಕನರ್ ಮತ್ತು ಮ್ಯಾಕ್ಸೆವೆಲ್ ತಲಾ 2 ವಿಕೆಟ್ ಕಬಳಿಸಿದರೆ, ವಾಟ್ಸನ್ ಮತ್ತು ಮಾರ್ಷ್ 1 ವಿಕೆಟ್ ಪಡೆದರು.
ನ್ಯೂಜಿಲೆಂಡ್ ನೀಡಿದ 143 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸೀಸ್ ತಂಡ ಕೊನೇ ಓವರ್ ತನಕ ಪ್ರತಿರೋಧ ಒಡ್ಡಿತಾದರೂ, ವೇಗಿ ಮಿಚೆಲ್ ಮೆಕ್ಲೀನಘನ್(17ಕ್ಕೆ 3) ದಾಳಿಗೆ 9 ವಿಕೆಟ್‌ಗೆ 134 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಡೇವಿಡ್ ವಾರ್ನರ್ ಬದಲು ಉಸ್ಮಾನ್ ಖವಾಜ(38) ಮತ್ತು ಶೇನ್ ವ್ಯಾಟ್ಸನ್‌ರನ್ನು (13) ಆರಂಭಿಕ ಜೋಡಿಯಾಗಿ ಕಣಕ್ಕಿಳಿಸಿದ ಆಸೀಸ್ ಪ್ರಯೋಗ ಫಲ ಕೊಡಲಿಲ್ಲ. ತಂಡದ ಮೊತ್ತ 44 ಆಗಿದ್ದಾಗ ವ್ಯಾಟ್ಸನ್, ಮೆಕ್ಲೀನಘನ್‌ಗೆ ಬಲಿಯಾದರು. ಭಾರತಕ್ಕೆ ಆಘಾತ ನೀಡಿದ್ದ ಸ್ಪಿನ್ನರ್ ಸ್ಯಾಂಟ್ನರ್, ನಾಯಕ ಸ್ಟೀವನ್ ಸ್ಮಿತ್(6) ಮತ್ತು ವಾರ್ನರ್‌ರನ್ನು(6) ಔಟ್ ಮಾಡಿದಾಗ 66ರನ್‌ಗೆ 4 ವಿಕೆಟ್ ಕಳೆದುಕೊಂಡು ಆಸೀಸ್ ಸೋಲಿನ ಭೀತಿ ಎದುರಿಸಿತು. ನಂತರ ಮ್ಯಾಕ್ಸ್ ವೆಲ್(22) ಜತೆ ಗೆಲುವಿನ ಪ್ರಯತ್ನಕ್ಕಿಳಿದ ಮಿಚೆಲ್ ಮಾರ್ಷ್(24)ರ ವಿಕೆಟ್ ಕಬಳಿಸಿದ ಮೆಕ್ಲೀನಘನ್ ಪಂದ್ಯಕ್ಕೆ ತಿರುವು ನೀಡಿದರು.
ನೂಜಿಲೆಂಡ್ ಪರ ಆ್ಯಂಡರ್ಸನ್ ಮತ್ತು ಸ್ಯಾಂಟ್ನರ್ 2 ವಿಕೆಟ್ ಕಬಳಿಸಿದರೆ, ಮೆಕ್ಲೀನಘನ್ 3 ವಿಕೆಟ್ ಕಬಳಿಸಿದರು. ಸೋಧಿ ಕೂಡ 1 ವಿಕೆಟ್ ಗಳಿಸಿ ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 134 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ನ್ಯೂಜಿಲೆಂಡ್ 8 ರನ್ ಗಳ ರೋಚಕ ಜಯಸಾಧಿಸಿತು.
ಆಸೀಸ್ ಪಡೆಯ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಮೆಕ್ಲೀನಘನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ