ಕಾಮೆಂಟೇಟರ್‌ಗಳ ವಿರುದ್ಧ ಬಿಗ್ ಬಿ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಹರ್ಷಾ ಭೋಗ್ಲೆ

ಭಾರತೀಯ ಕಾಮೆಂಟೇಟರ್‌ಗಳು ಇತರ ಆಟಗಾರರ ಬಗ್ಗೆ ಹೇಳುವುದಕ್ಕಿಂತ ನಮ್ಮ ತಂಡದ ಆಟಗಾರರ ಬಗ್ಗೆ ಹೇಳಿದರೆ ಒಳ್ಳೆಯದಿತ್ತು ಎಂದು ಬಿಗ್ ಬಿ ಟ್ವೀಟ್ ಮಾಡಿದ್ದರು...
ಹರ್ಷಾ ಭೋಗ್ಲೆ
ಹರ್ಷಾ ಭೋಗ್ಲೆ
ನವದೆಹಲಿ: ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭಾರತ- ಬಾಂಗ್ಲಾದೇಶ ನಡುವಿನ ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ಭಾರತೀಯ ಕಾಮೆಂಟೇಟರ್‌ಗಳ ಬಗ್ಗೆ ಅಮಿತಾಭ್ ಬಚ್ಚನ್  ಅಸಮಾಧಾನ ಸೂಚಿಸಿ ಟ್ವೀಟ್ ಮಾಡಿದ್ದರು. 
ಭಾರತೀಯ ಕಾಮೆಂಟೇಟರ್‌ಗಳು ಟೀಂ ಇಂಡಿಯಾದ ಬಗ್ಗೆ ಗಮನ ಹರಿಸುವುದಕ್ಕಿಂತ ಹೆಚ್ಚು ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಹುರಿದುಂಬಿಸುತ್ತಿದ್ದರು ಎಂಬ ಅರ್ಥದಲ್ಲಿ ಆ ಟ್ವೀಟ್ ಇತ್ತು.
ಗೌರವಪೂರ್ಣವಾಗಿಯೇ ಹೇಳುತ್ತಿದ್ದೇನೆ, ಭಾರತೀಯ ಕಾಮೆಂಟೇಟರ್‌ಗಳು ಇತರ ಆಟಗಾರರ ಬಗ್ಗೆ ಹೇಳುವುದಕ್ಕಿಂತ ನಮ್ಮ ತಂಡದ ಆಟಗಾರರ ಬಗ್ಗೆ ಹೇಳಿದರೆ ಒಳ್ಳೆಯದಿತ್ತು ಎಂದು ಬಿಗ್ ಬಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನೆಟಿಜನ್ ಒಬ್ಬರಿಗೆ ಉತ್ತರಿಸುತ್ತಾ ಬಿಗ್ ಬಿ, ಯಾವಾಗ ನೋಡಿದರೂ ಇವರು (ಭಾರತೀಯ ಕಾಮೆಂಟೇಟರ್‌ಗಳು) ಅವರ (ವಿರುದ್ಧ ತಂಡ) ವನ್ನು ಹೊಗಳುತ್ತಿರುತ್ತಾರೆ. ಅವರ ಬ್ಯಾಟ್ಸ್‌ಮೆನ್ ಗಳು ಔಟಾದರೆ ಇವರಿಗೆ ಬೇಸರವಾಗುತ್ತದೆ..ನಾವು ಬೌಲಿಂಗ್ ಮಾಡುತ್ತಿದ್ದೇವಲ್ಲಾ... ಎಂದು ಟ್ವೀಟಿಸಿದ್ದಾರೆ.
ಅದೇ ವೇಳೆ ಇನ್ನೊಂದು ಟ್ವೀಟ್ ನಲ್ಲಿ ಗೌರವ್ ಚಾವ್ಲಾ ಎಂಬವರಿಗೆ ಉತ್ತರಿಸುವಾಗ, ಕೂಲ್...ಇದಕ್ಕೆಲ್ಲಾ ಒಂದು  ಮಿತಿಯಿದೆ. ನಮ್ಮ ಆಟಗಾರರೇ ಸದಾ ತಪ್ಪು ಮಾಡಿದಂತೆ ಕಾಮೆಂಟರ್‌ಗಳು ಅಭಿಪ್ರಾಯ ಪಡುತ್ತಾರೆ..ಇದೆಲ್ಲಾ ಸಹಿಸಿಕೊಳ್ಳಲು ಸಾಧ್ಯವಿಲ್ಲ...
ಇದೆಲ್ಲಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇತರ ಕಾಮೆಂಟೇಟರ್‌ಗಳೆಲ್ಲಾ ಹೇಗೆ ಅವರವರ ತಂಡವನ್ನು ಹುರಿದುಂಬಿಸುತ್ತಿದ್ದಾರೆ ನೋಡಿ...ನಮ್ಮವರು ಮಾತ್ರ ಹೀಗೆ...
ಇವರೆಲ್ಲಾ ಪಕ್ಷಪಾತ ತೋರಿಸುತ್ತಿದ್ದಾರೆ. ಸದಾ ವಿರುದ್ಧ ತಂಡದ ಬಗ್ಗೆ ಮಾತನಾಡುತ್ತಾ ಅವರನ್ನೇ ಹೊಗಳುತ್ತಿರುತ್ತಾರೆ ಎಂದು ಬಚ್ಚನ್ ಟ್ವೀಟ್  ಮಾಡಿದ್ದರು.
ಬಚ್ಚನ್ ಅಸಮಾಧಾನ ವ್ಯಕ್ತಪಡಿಸಿರುವ ಭಾರತೀಯ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಅಥವಾ ಸುನಿಲ್ ಗವಾಸ್ಕರ್ ಆಗಿರಬಹುದೇ? ಎಂದು ನೆಟಿಜನ್ ಗಳಲ್ಲಿ ಕೆಲವರು ಕೇಳಿದಾಗ ಇವರ್ಯಾರೂ ಅಲ್ಲ ಎಂದು ಬಚ್ಚನ್ ಉತ್ತರಿಸಿದ್ದರು.
ಬಚ್ಚನ್‌ರವರು ಕಾಮೆಂಟೇಟರ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾಡಿದ ಟ್ವೀಟ್‌ನ್ನು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ಮರುಟ್ವೀಟ್ ಮಾಡಿ, ಬಿಗ್ ಬಿ ಅವರಿಗೆ ಬೆಂಬಲ ಸೂಚಿಸಿದ್ದರು. 
ಆದಾಗ್ಯೂ, ಬಚ್ಚನ್‌ರ ಈ ಟ್ವೀಟ್‌ಗೆ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಹರ್ಷಾ ಭೋಗ್ಲೆ ಗುರುವಾರ ಫೇಸ್‌ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಚ್ಚನ್ ಹೇಳಿದ್ದು ಭೋಗ್ಲೆ ಬಗ್ಗೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದೇ ಇದ್ದರೂ, ಅದು ಭೋಗ್ಲೆಯವರಿಗೇ ಹೇಳಿರುವಂತಿದೆ. 
ಆದ್ದರಿಂದಲೇ ಭೋಗ್ಲೆ ತಮ್ಮ ಫೇಸ್‌ಬುಕ್ ವಾಲ್ ನಲ್ಲಿ ಬಚ್ಚನ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಭೋಗ್ಲೆ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದಂತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲಿಷ್ ಕಾಮೆಂಟರಿ ಪ್ರಸಾರ ಮಾಡಲಾಗಿತ್ತು. ಈ ಕಾಮೆಂಟರಿಯಲ್ಲಿ ಉಭಯ ದೇಶಗಳ ಪ್ರದರ್ಶನದ ಬಗ್ಗೆ ಸಮತೂಕದ ಕಾಮೆಂಟರಿ ನೀಡಬೇಕಾಗುತ್ತದೆ. ಹಿಂದಿಯಲ್ಲಿ ಪ್ರಸಾರ ಮಾಡಿರುವ ಕಾಮೆಂಟರಿ ದೇಶದ ಪ್ರೇಕ್ಷಕರನ್ನು ಉದ್ದೇಶಿಸಿರುತ್ತದೆ. ಒಂದು ವೇಳೆ ಇಂಗ್ಲಿಷ್‌ನಲ್ಲಿ ಮಾಡಿದ ಕಾಮೆಂಟರಿಯನ್ನು ಭಾರತಕ್ಕೆ ಮಾತ್ರ ಸೀಮಿತಗೊಳಿಸಿದರೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರವಾಗುವಾಗ ಪಕ್ಷಪಾತ ಮಾಡಿದಂತಾಗುತ್ತದೆ ಎಂದು ಹರ್ಷಾ ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com