ಧೋನಿ ಅದೇನು ಸಾಬೀತು ಪಡಿಸಲು ಯತ್ನಿಸುತ್ತಿದ್ದಾರೆ?: ಯೋಗರಾಜ್ ಸಿಂಗ್

ನಾಯಕ ಧೋನಿ, ಯುವಿ ಉತ್ತಮ ಪ್ರದರ್ಶನ ನೀಡಲಿ ಎಂದು ನಿರೀಕ್ಷಿಸುತ್ತಾನೆ. ಅದೇ ವೇಳೆ ಆತನನ್ನು 7 ನೇ ಕ್ರಮಾಂಕಕ್ಕೆ ಇಳಿಸಲಾಗುತ್ತದೆ..
ಯೋಗರಾಜ್ ಸಿಂಗ್
ಯೋಗರಾಜ್ ಸಿಂಗ್
ಮೊಹಾಲಿ: ಯುವರಾಜ್ ಸಿಂಗ್ ಅಪ್ಪ ಯೋಗರಾಜ್ ಸಿಂಗ್ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಮತ್ತೆ ವಾಗ್ದಾಳಿ ಆರಂಭಿಸಿದ್ದಾರೆ.
ಶನಿವಾರ ಮಿಡ್ ಡೇ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಯೋಗರಾಜ್ ಸಿಂಗ್ ಧೋನಿ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವುಳಿದಿದ್ದ ಯುವಿ, ಮತ್ತೆ ಬಂದು ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಅದಕ್ಕೆ ನಾನು ಆತನನ್ನು ಅಭಿನಂದಿಸುತ್ತೇನೆ. ನಾಯಕ ಧೋನಿ, ಯುವಿ ಉತ್ತಮ ಪ್ರದರ್ಶನ ನೀಡಲಿ ಎಂದು ನಿರೀಕ್ಷಿಸುತ್ತಾನೆ. ಅದೇ ವೇಳೆ ಆತನನ್ನು 7 ನೇ ಕ್ರಮಾಂಕಕ್ಕೆ ಇಳಿಸಲಾಗುತ್ತದೆ. ಏನು ನಡೆಯುತ್ತಿದೆ ಅಲ್ಲಿ? ಧೋನಿ ಅದೇನು ಸಾಬೀತು ಪಡಿಸಲು ಯತ್ನಿಸುತ್ತಿದ್ದಾರೆ? ಎಂದು ಯೋಗರಾಜ್ ಪ್ರಶ್ನಿಸಿದ್ದಾರೆ. 
ಆಗಾಗ ಹೀಗೆ ಕ್ರಮಾಂಕದಲ್ಲಿ ಬದಲಾವಣೆ ಮಾಡುತ್ತಿದ್ದರೆ, ಇದೊಂದೊ ಕ್ರಿಕೆಟ್ ಹೌದೋ ಅಲ್ಲವೋ ಎಂಬ ಪ್ರಶ್ನೆ ಆಟಗಾರರ ಮನಸ್ಸಲ್ಲಿ ಹುಟ್ಟಿಕೊಳ್ಳುತ್ತದೆ. ನಾನು ಈ ತಂಡದಲ್ಲಿ ಬೇಕೋಬೇಡವೋ ಎಂಬ ಪ್ರಶ್ನೆ ಆಟಗಾರರಲ್ಲಿರುತ್ತದೆ. ಈ ರೀತಿ ಮಾಡುವಾಗ ನಾಯಕ ಅತ್ಯಂತ ಜಾಗ್ರತೆ ವಹಿಸಬೇಕು.
ನೀನು ಯಾವುದರ ಬಗ್ಗೆಯೂ ಚಿಂತೆ ಮಾಡಬೇಡ. ನಿನ್ನ ಸಮಯ ಬಂದೇ ಬರುತ್ತದೆ ಎಂದು ನಾನು ನನ್ನ ಮಗನಿಗೆ ಹೇಳಿದ್ದೇನೆ. ಒಂದು ವೇಳೆ ಧೋನಿಯನ್ನು ಎರಡು ವರ್ಷ ಕೈ ಬಿಟ್ಟರೆ, ಆತದ ಮತ್ತೆ ವಾಪಸ್ ಬರುತ್ತಾನಾ? ಬಂದರೆ ಒಂದೇ ಒಂದು ರನ್ ಗಳಿಸಲು ಆತನಿಂದ ಸಾಧ್ಯವಾಗುವುದೇ? ಎಂಬುದನ್ನು ನೋಡಬೇಕಿದೆ. 
ಏತನ್ಮಧ್ಯೆ, ಧೋನಿ ಯುವರಾಜ್ ನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಯೋಗರಾಜ್ ಆರೋಪಿಸಿದ್ದಾರೆ. 
ಧೋನಿಗೆ ಯುವರಾಜ್‌ನ್ನು ಇಷ್ಟವಿಲ್ಲದೇ ಇದ್ದರೆ, ಆತ ಈ ಬಗ್ಗೆ ಆಯ್ಕೆಗಾರರಿಗೆ ಹೇಳಬೇಕು. ಅದು ಬಿಟ್ಟು, ಈ ರೀತಿ ವರ್ತಿಸುತ್ತಿದ್ದರೆ ಆತ ಇಡೀ ತಂಡವನ್ನೇ ನಾಶ ಮಾಡುತ್ತಿದ್ದಾನೆ. ಟರ್ನಿಂಗ್ ವಿಕೆಟ್ ನಲ್ಲಿ ಯುವರಾಜ್  ಚೆನ್ನಾಗಿ ಆಡಬಲ್ಲರು. 2011ರ ವಿಶ್ವಕಪ್ ನಲ್ಲಿ ಅವರು 15 ವಿಕೆಟ್ ಪಡೆದಿರುವುದನ್ನು ಜಗತ್ತೇ ನೋಡಿದೆ ಎಂದಿದ್ದಾರೆ ಯುವಿ ಅಪ್ಪ.
2015ರ ವಿಶ್ವಕಪ್ ಪಂದ್ಯದಲ್ಲಿ ಯುವರಾಜ್ ನ್ನು ಆಯ್ಕೆ ಮಾಡದೇ ಇದ್ದಾಗ ಯೋಗರಾಜ್ ಸಿಂಗ್ ಧೋನಿಯನ್ನು ಸಿಕ್ಕಾಪಟ್ಟೆ ಬೈದಿದ್ದರು.
ಆತ ಅಹಂಕಾರಿ. ರಾವಣನ ಸೊಕ್ಕು ಹೇಗೆ ಮುರಿಯಿತೋ ಹಾಗೆಯೇ ಧೋನಿಗೂ ಆಗಲಿದೆ. ಆತ ಇದಕ್ಕೆಲ್ಲಾ ಬೆಲೆ ತೆರಬೇಕಾಗಿಯೇ ಬರುತ್ತದೆ. ಆತ ರಾವಣನಿಂದಲೂ ಮೇಲು ಎಂದು ಭಾವಿಸಿದ್ದಾನೆ ಎಂದು ಯೋಗರಾಜ್ ಕಿಡಿಕಾರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com