ಅಜೇಯ ನ್ಯೂಜಿಲೆಂಡ್ ಗೆ ಮುಖಭಂಗ: ಫೈನಲ್ ಗೆ ಇಂಗ್ಲೆಂಡ್ ಲಗ್ಗೆ

ಇಂಗ್ಲೆಂಡ್ ನ ಸ್ಫೋಟಕ ಬ್ಯಾಟ್ಸಮನ್ ಜೇಸನ್ ರಾಯ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಕಿವೀಸ್ ವಿರುದ್ಧ ಇಂಗ್ಲೆಂಡ್..
ಇಂಗ್ಲೆಂಡ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಜೇಸನ್ ರಾಯ್ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಇಂಗ್ಲೆಂಡ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಜೇಸನ್ ರಾಯ್ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: ಕ್ರಿಕ್ ಇನ್ಫೋ)

ನವದೆಹಲಿ: ಇಂಗ್ಲೆಂಡ್ ನ ಸ್ಫೋಟಕ ಬ್ಯಾಟ್ಸಮನ್ ಜೇಸನ್ ರಾಯ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಭರ್ಜರಿ 7 ವಿಕೆಟ್ ಗಳ ಜಯ ದಾಖಲಿಸುವುದರೊಂದಿಗೆ 2016ನೇ ಸಾಲಿನ ಟಿ20 ವಿಶ್ವಕಪ್ ನ ಫೈನಲ್ ಪ್ರವೇಶ ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮುನ್ರೋ (46 ರನ್) ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಪೇರಿಸಿತು. ಕಿವೀಸ್ ಪಡೆ ನೀಡಿದ 154 ರನ್ ಗಳ ಗುರಿ ಬೆನ್ನುಹತ್ತಿದ ಇಂಗ್ಲೆಂಡ್ ಗೆ ಸ್ಫೋಟಕ ಬ್ಯಾಟ್ಸಮನ್ ಜೇಸನ್ ರಾಯ್ (78 ರನ್) ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಒಟ್ಟು 44 ಎಸೆತಗಳನ್ನು ಎದುರಿಸಿದ ರಾಯ್ ಬರೊಬ್ಬರಿ 78 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಬಹುತೇಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದ ರಾಯ್ ತಂಡದ ಮೊತ್ತ 110 ರನ್ ಗಳಾಗಿದ್ದಾಗ ಸೋದಿ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಲೀನ್ ಬೋಲ್ಡ್ ಆದರು.

ಆ ಬಳಿಕ ಕ್ರೀಸ್ ಗೆ ಬಂದ ಮೊರ್ಗನ್ ಕೂಡ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ಇಂಗ್ಲೆಂಡ್ ತಂಡ ಒತ್ತಡಕ್ಕೆ ಸಿಲುಕಿತ್ತು. ಆದರೆ ಈ ಹಂತದಲ್ಲಿ ಜೋಡಿಯಾದ ಜೋ ರೂಟ್ (27 ರನ್) ಮತ್ತು ಬಟ್ಲರ್ (32ರನ್) ಯಾವುದೇ ಅಪಾಯಕ್ಕೆ ಆಸ್ಪದ ನೀಡದೇ ಬಾಕಿ ಉಳಿದ ಗೆಲುವಿನ ರನ್ ಗಳನ್ನು ಸರಾಗವಾಗಿ ಕಲೆ ಹಾಕಿದರು. ಆ ಮೂಲಕ ಇಂಗ್ಲೆಂಡ್ ತಂಡ ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ 17.1 ಓವರ್ ನಲ್ಲಿ 159 ರನ್ ಗಳಿಸಿ ನ್ಯೂಜಿಲೆಂಡ್ ತಂಡವನ್ನು ಭರ್ಜರಿಯಾಗಿ ಮಣಿಸಿತು. ಅಲ್ಲದೆ 2016ನೇ ಸಾಲಿನ ಟಿ20 ವಿಶ್ವಕಪ್ ಫೈನಲ್ ಗೆ ಲಗ್ಗೆ ಇಟ್ಟ ಮೊದಲ ತಂಡವೆಂಬ ಖ್ಯಾತಿಗೂ ಪಾತ್ರವಾಯಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಜೇಸನ್ ರಾಯ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ನಾಳೆ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಮಿಫೈನಲ್ ನಲ್ಲಿ ಸೆಣಸಲಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಏಪ್ರಿಲ್ 3 ಭಾನುವಾರದಂದು ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಇಂಗ್ಲೆಂಡ್ ತಂಡವನ್ನು ಫೈನಲ್ ನಲ್ಲಿ ಎದುರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com