ಮಹೇಂದ್ರ ಸಿಂಗ್ ಧೋನಿಯನ್ನು ಸುತ್ತುವರಿದಿರುವ ಫೀಲ್ಡರ್ ಗಳು
ಕ್ರಿಕೆಟ್
ಧೋನಿಗೆ ಒತ್ತಡ ಹೇರಲು ಗಂಭೀರ್ ಹೂಡಿದ ರಣತಂತ್ರವೇನು ಗೊತ್ತಾ?
ಕೊಲ್ಕತ್ತಾ ತಂಡದ ಪ್ರಧಾನ ಟಾರ್ಗೆಟ್ ಧೋನಿಯೇ ಆಗಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಪುಣೆ ತಂಡ, ಕೊಲ್ಕತ್ತಾ ತಂಡದ ಬೌಲರ್‌ಗಳ ದಾಳಿಗೆ ತತ್ತರಿಸಿ...
ನವದೆಹಲಿ: ಶನಿವಾರ ಕೊಲ್ಕತ್ತಾದ ಈಡೆನ್ ಗಾರ್ಡೆನ್ ಕ್ರೀಡಾಂಗಣದಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಡಕ್‌ವರ್ಥ್ ಲೂಯಿಸ್ ನಿಯಮ ಪ್ರಕಾರ ಕೊಲ್ಕತ್ತಾ ತಂಡ 8 ವಿಕೆಟ್‌ಗಳ ಗೆಲುವು ಸಾಧಿಸಿತ್ತು.
ಸತತ ಸೋಲುಗಳನ್ನು ಅನುಭವಿಸುತ್ತಲೇ ಇರುವ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಗೌತಮ್ ಗಂಭೀರ್ ನಾಯಕತ್ವದ ಕೊಲ್ಕತ್ತಾ ತಂಡ ಮಣಿಸಿದ್ದು ಮಾತ್ರ ವಿಶೇಷವಲ್ಲ, ಮ್ಯಾಚ್ ಗೆಲ್ಲಲು ಗಂಭೀರ್ ಹೂಡಿದ ರಣತಂತ್ರ ಹೆಚ್ಚಿನ ಪ್ರಶಂಸೆಗೆ ಪಾತ್ರವಾಗಿದೆ.
ಕೊಲ್ಕತ್ತಾ ತಂಡದ ಪ್ರಧಾನ ಟಾರ್ಗೆಟ್ ಧೋನಿಯೇ ಆಗಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಪುಣೆ ತಂಡ, ಕೊಲ್ಕತ್ತಾ ತಂಡದ ಬೌಲರ್‌ಗಳ ದಾಳಿಗೆ ತತ್ತರಿಸಿ ಹೋಗಿತ್ತು. ಅದರಲ್ಲಿಯೂ 6 ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಧೋನಿಯ ಮೇಲೆ ಒತ್ತಡ ಹೇರಲು ಗಂಭೀರ್ ರೂಪಿಸಿದ ರಣತಂತ್ರ ಎಲ್ಲರನ್ನೂ ಅಚ್ಚರಿ ಪಡಿಸುವಂತಿತ್ತು.
ಪುಣೆ ತಂಡದ ಸ್ಕೋರ್ ನಾಲ್ಕು ವಿಕೆಟ್ ಕಳೆದು ಕೊಂಡು 74 ರನ್‌ಗಳಾಗಿರುವಾಗ ಧೋನಿ ಕ್ರೀಸ್‌ಗಿಳಿದಿದ್ದರು. ಧೋನಿ ಬ್ಯಾಟಿಂಗ್‌ಗೆ ಸಜ್ಜಾದಾಗ ಅವರ ಸುತ್ತಲೂ ಅಂದರೆ ಸಿಲ್ಲಿ ಪಾಯಿಂಟ್‌ನಲ್ಲಿ ಒಬ್ಬರು, ಸ್ಲಿಪ್ ನಲ್ಲಿ ಇಬ್ಬರು ಮತ್ತು ಶಾರ್ಟ್ ಲೆಗ್ ಸೈಡ್‌ನಲ್ಲಿ ಫೀಲ್ಡರ್‌ಗಳನ್ನು ನಿಯೋಜಿಸುವ ಮೂಲಕ ಧೋನಿ ಮೇಲೆ ಕೊಲ್ಕತ್ತಾ ತಂಡ ಒತ್ತಡ ಹೇರಿತ್ತು.
ಹೀಗೆ ಒತ್ತಡ ಹೇರಿರುವುದರ ಪರಿಣಾಮ ಧೋನಿಗೆ 22 ಬಾಲ್‌ಗಳಲ್ಲಿ ಕೇವಲ 8 ರನ್‌ಗಳನ್ನಷ್ಟೇ ದಾಲಿಸಲು ಸಾಧ್ಯವಾಯಿತು.
ಧೋನಿಯನ್ನು ಆದಷ್ಟು ಬೇಗ ಔಟ್ ಮಾಡಬೇಕೆಂದೇ ನಾವು ಯೋಜನೆ ಹೂಡಿದ್ದೆವು ಎಂದು ಕೆಕೆಆರ್ ತಂಡದ ಕೋಚ್ ಜಾಕ್ವೆಸ್ ಕಾಲೀಸ್ ಹೇಳಿದ್ದಾರೆ.
ಆದಾಗ್ಯೂ, ಧೋನಿಯನ್ನು ಔಟ್ ಮಾಡಲು ಗಂಭೀರ್ ಈ ರೀತಿಯ ರಣತಂತ್ರ ಹೂಡಿರುವುದು ಇದೇ ಮೊದಲಬಾರಿಯೇನೂ ಅಲ್ಲ. 2015ರ ಐಪಿಎಲ್‌ನಲ್ಲಿ ಕೆಕೆಆರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ, 2015ರ ಜಾರ್ಖಂಡ್ ಮತ್ತು ದೆಹಲಿ ನಡುವಿನ ಪಂದ್ಯ ಸೇರಿದಂತೆ ಪ್ರಸ್ತುತ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಲ್ಲಿಯೂ ಗಂಭೀರ್ ಇದೇ ರೀತಿಯ ರಣತಂತ್ರ ರೂಪಿಸಿದ್ದರು.
ಗಂಭೀರ್ ಅವರ ಈ ಗೇಮ್‌ಪ್ಲಾನ್‌ನ್ನು ನೋಡಿದರೆ ಧೋನಿಯ ಮೇಲೆ ಗಂಭೀರ್ ಸಿಟ್ಟಿಗೆದ್ದಂತೆ ಕಾಣುತ್ತಿದೆ ಎಂದು ಕೆಲವು ನೆಟಿಜನ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. ಕೆಲವರು ಗಂಭೀರ್‌ನ್ನು ಕೋಪಿಷ್ಠ ಎಂದರೆ ಇನ್ನು ಕೆಲವರು ಆತನಿಗೆ ಸೊಕ್ಕು ಎಂದಿದ್ದಾರೆ.
ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಡಕ್‌ವರ್ಥ್ ಲೂಯಿಸ್ ನಿಯಮ ಪ್ರಕಾರ ಕೊಲ್ಕತ್ತಾ ತಂಡಕ್ಕೆ 9 ಓವರ್‌ಗಳಲ್ಲಿ 66 ರನ್ ಗಳಿಸಿದರೆ ಸಾಕಿತ್ತು. ಕೊಲ್ಕತ್ತಾ ತಂಡ 5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಈ ಗುರಿ ತಲುಪಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ