ಪಂಜಾಬ್ ವಿರುದ್ಧ ಹೈದರಾಬಾದ್ ಗೆ 7 ವಿಕೆಟ್ ಗಳ ಭರ್ಜರಿ ಜಯ

ಫಾರ್ಮ್ ಗೆ ಮರಳಿದ ಯುವರಾಜ್ ಸಿಂಗ್ ಭರ್ಜರಿ ಬ್ಯಾಟಿಂಗ್ ಮತ್ತು ಡೇವಿಡ್ ವಾರ್ನರ್ ಅವರ ಅಮೋಘ ಅರ್ಧಶತಕದ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿ, ತನ್ನ ಪ್ಲೇ ಆಫ್ ಹಾದಿ ಸುಗಮ ಮಾಡಿಕೊಂಡಿದೆ...
ಫಾರ್ಮ್ ಗೆ ಮರಳಿದ ಯುವಿ ಬ್ಯಾಟಿಂಗ್ ವೈಖರಿ (ಕ್ರಿಕ್ ಇನ್ಫೋ ಚಿತ್ರ)
ಫಾರ್ಮ್ ಗೆ ಮರಳಿದ ಯುವಿ ಬ್ಯಾಟಿಂಗ್ ವೈಖರಿ (ಕ್ರಿಕ್ ಇನ್ಫೋ ಚಿತ್ರ)

ಮೊಹಾಲಿ: ಫಾರ್ಮ್ ಗೆ ಮರಳಿದ ಯುವರಾಜ್ ಸಿಂಗ್ ಭರ್ಜರಿ ಬ್ಯಾಟಿಂಗ್ ಮತ್ತು ಡೇವಿಡ್ ವಾರ್ನರ್ ಅವರ ಅಮೋಘ ಅರ್ಧಶತಕದ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್ ತಂಡ ಕಿಂಗ್ಸ್  ಇಲೆವೆನ್ ಪಂಜಾಬ್ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿ, ತನ್ನ ಪ್ಲೇ ಆಫ್ ಹಾದಿ ಸುಗಮ ಮಾಡಿಕೊಂಡಿದೆ.

ಮೊಹಾಲಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಪಂಜಾಬ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ ಗೆ ಇಳಿದ ಪಂಜಾಬ್ ಗೆ ಆರಂಭಿಕ ಆಟಗಾರ  ಹಶೀಮ್ ಆಮ್ಲಾ (96 ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಪಂಜಾಬ್ ಪರ ಏಕಾಂಗಿ ಪ್ರದರ್ಶನ  ನೀಡಿದ ಆಮ್ಲಾ ಒಂದೆಡೆ ವಿಕೆಟ್ ಉರುಳುತ್ತಿದ್ದರೂ ತಮ್ಮ ಉತ್ತಮ ಬ್ಯಾಟಿಂಗ್ ಮುಂದುವರೆಸಿ ತಂಡದ ಮೊತ್ತ 150ರ ಗಡಿ ದಾಟುವಂತೆ ನೋಡಿಕೊಂಡರು. ಇನ್ನಿಂಗ್ಸ್ ನ ಕೊನೆಯ ಓವರ್ ನ  4ನೇ ಎಸೆತದಲ್ಲಿ 96 ರನ್ ಗಳಿಸಿದ್ದ ಆಮ್ಲಾ ಕೇವಲ 4 ರನ್ ಗಳ ಅಂತರದಲ್ಲಿ ಶತಕ ವಂಚಿತರಾದರು.

ಉಳಿದಂತೆ ಗುರ್ಕೀತ್ ಸಿಂಗ್ (27 ರನ್), ಮಿಲ್ಲರ್ (20 ರನ್) ಮತ್ತು ವೃದ್ಧಿಮಾನ್ ಸಹಾ (27 ರನ್) ಆಮ್ಲಾಗೆ ಸಾಥ್ ನೀಡುವ ಪ್ರಯತ್ನ ಮಾಡಿದರು. ಅಂತಿಮವಾಗಿ ಪಂಜಾಬ್ ತಂಡ ನಿಗದಿತ 20  ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಗಳ ಬೃಹತ್ ಮೊತ್ತ ಪೇರಿಸಿತು.

ಪಂಜಾಬ್ ನೀಡಿದ 179 ರನ್ ಗುರಿ ಬೆನ್ನತ್ತಿದ ಹೈದರಾಬಾದ್ 19.4 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 180 ರನ್ ಗಳಿಸ ಜಯ ಸಾಧಿಸಿತು. ಹೈದರಾಬಾದ್ ತಂಡಕ್ಕೆ ನಾಯಕ ಡೇವಿಡ್  ವಾರ್ನರ್ ಭರ್ಜರಿ ಆರಂಭ ಒದಗಿಸಿದರು. ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಿದ ವಾರ್ನರ್ ಮೊದಲ ವಿಕೆಟ್ ಗೆ ಅರ್ಧಶತಕದ ಜೊತೆಯಾಟವಾಡಿದರು. ಧವನ್ ಔಟ್ ಆದ ಬಳಿಕ ಆಟ  ಮುಂದುವರೆಸಿದ ವಾರ್ನರ್ ನೋಡ ನೋಡುತ್ತಿದ್ದಂತೆಯೇ ಅರ್ಧಶತಕ ಗಳಿಸಿದರು. ಬಳಿಕ ಅಷ್ಟೇ ವೇಗದಲ್ಲಿ 52 ರನ್ ಗಳಿಸಿದ್ದ ವಾರ್ನರ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು. ಹೂಡ ಕೂಡ 34  ರನ್ ಗಳಿಸಿ ಔಟ್ ಆದರೆ, ಬಳಿಕ ಬಂದ ಯುವರಾಜ್ ಸಿಂಗ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಕೇವಲ 24 ಎಸೆತಗಳಲ್ಲಿ ಅಜೇಯ 42 ರನ್ ಸಿಡಿಸಿದ ಯುವಿ ಹೈದರಾಬಾದ್ ತಂಡಕ್ಕೆ ಗೆಲುವು  ತಂದಿತ್ತರು.

ಈ ಗೆಲುವಿನೊಂದಿಗೆ ಹೈದರಾಬಾದ್ ತಂಡ ಬಹುತೇಕ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆದಿದೆ. ಪಂಜಾಬ್ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಆಮ್ಲಾ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com