
ನವದೆಹಲಿ: ಮುಂಬರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ದ ತ್ರಿಕೋನ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ತಂಡದ ಆಯ್ಕೆ ವಿರುದ್ಧ ಇತರೆ ಆಟಗಾರರಾದ ಕ್ರಿಸ್ ಗೇಯ್ಲ್, ಬ್ರಾವೋ ಮತ್ತು ಡರೇನ್ ಸಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಂಡೀಸ್ ಕ್ರಿಕೆಟ್ ಮಂಡಳಿ ಹಾಗೂ ಆಟಗಾರರ ನಡುವಿನ ತಿಕ್ಕಾಟ ಟಿ20 ವಿಶ್ವಕಪ್ ಬಳಿಕವೂ ಮುಂದುವರೆದಿದ್ದು, ತ್ರಿಕೋನ ಏಕದಿನ ಸರಣಿಗಾಗಿ ತಂಡದ ಆಯ್ಕೆ ಕುರಿತು ಕ್ರಿಸ್ ಗೇಯ್ಲ್, ಡ್ವೇಯ್ನ್ ಬ್ರಾವೋ ಮತ್ತು ಡರೇನ್ ಸಾಮಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಈ ಮೂವರು ಆಟಗಾರರು, "ಭಾರತದಲ್ಲಿ ನಡೆದ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ವಿಂಡೀಸ್ ತಂಡ ಚಾಂಪಿಯನ್ ಆಗಲು ಕಾರಣರಾಗಿದ್ದ ಕೆಲ ಪ್ರಮುಖ ಆಟಗಾರರನ್ನು ವಿಂಡೀಸ್ ಮಂಡಳಿ ಕೈಬಿಟ್ಟಿದೆ. ಕಾರ್ಲೊಸ್ ಬ್ರಾಥ್‌ವೈಟ್, ಕೀರನ್ ಪೊಲಾರ್ಡ್ ಮತ್ತು ಸ್ಪಿನ್ನರ್ ಸುನಿಲ್ ನಾರಾಯಣ್ ಅವರಿಗೆ ಸ್ಥಾನ ಲಭಿಸಿದೆ. ವಿಂಡೀಸ್ ಆಯ್ಕೆ ಸಮಿತಿ ನನ್ನನ್ನು ತಂಡಕ್ಕೆ ಪರಿಗಣಿಸಿಲ್ಲ. ವಾವ್.. ಇದು ದಿನದ ದೊಡ್ಡ ತಮಾಷೆ’ ಎಂದು ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿ ಆಡುತ್ತಿರುವ ಬ್ರಾವೊ ಟ್ವಿಟರ್‌ನಲ್ಲಿ ವ್ಯಂಗ್ಯ ಮಾಡಿದ್ದಾರೆ.
ಅಂತೆಯೇ ಆಯ್ಕೆ ಸಮಿತಿಯವರನ್ನು ತರಾಟೆಗೆ ತೆಗೆದುಕೊಂಡಿರುವ ಕ್ರಿಸ್ ಗೇಲ್ ಮತ್ತು ಸಾಮಿ ‘ತ್ರಿಕೋನ ಸರಣಿಗೆ ಪೊಲಾರ್ಡ್ ಹಾಗೂ ಸುನಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ವಿಂಡೀಸ್ ಕ್ರಿಕೆಟ್‌ನಲ್ಲಿ ಇದೆಲ್ಲವೂ ಹೇಗೆ ಸಾಧ್ಯ. ಏಕದಿನ ತಂಡಕ್ಕೆ ಪೊಲಾರ್ಡ್ ಮರಳಿ ಬಂದಿರುವುದು ಅಮೋಘ ಸಾಧನೆಯೇ ಸರಿ. 2014ರಿಂದ ಒಂದೂ ಏಕದಿನ ಪಂದ್ಯವಾಡದ ಪೊಲಾರ್ಡ್‌ಗೆ ತಂಡದಲ್ಲಿ ಹೇಗೆ ಸ್ಥಾನ ಲಭಿಸಿತು ಎನ್ನುವುದೇ ಅಚ್ಚರಿ. ಈ ತಂಡದ ಆಯ್ಕೆಗೆ ಇರುವ ಮಾನದಂಡವಾದರೂ ಏನು ಎನ್ನುವುದನ್ನು ಹೇಳುವಿರಾ’ ಎಂದು ಸಾಮಿ ವಿಂಡೀಸ್ ಕ್ರಿಕೆಟ್ ಮಂಡಳಿಗೆ ಛಾಟಿ ಬೀಸಿದ್ದಾರೆ.
ಒಟ್ಟಾರೆ ವಿಂಡೀಸ್ ಕ್ರಿಕೆಟ್ ಮಂಡಳಿ ಹಾಗೂ ಆಟಗಾರರ ನಡುವಿನ ಘರ್ಷಣೆ ಮುಂದುವರೆದಿದ್ದು, ಟ್ವೀಟ್ ಸಮರ ಎಲ್ಲಿಗೆ ಮುಟ್ಟಿತ್ತದೆ ಕಾದು ನೋಡಬೇಕಿದೆ.
Advertisement