ಕೊನೆಯ ಎಸೆತದಲ್ಲಿ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡ "ಡೇರ್ ಡೆವಿಲ್ಸ್"

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ದೆಹಲಿ ಆಟ ಮುಗಿದೇ ಹೊಯ್ತು ಎನ್ನುವಷ್ಟರಲ್ಲಿ ಕೊನೆಯ ಎಸೆತದಲ್ಲಿ ರೋಚಕ ಜಯ ದಾಖಲಿಸುವ ಮೂಲಕ ದೆಹಲಿ ಡೇರ್ ಡೆವಿಲ್ಸ್ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ..
ಕೆಕೆ ನಾಯರ್ ಆಟದ ಭಂಗಿ (ಕ್ರಿಕ್ ಇನ್ಫೋ ಚಿತ್ರ)
ಕೆಕೆ ನಾಯರ್ ಆಟದ ಭಂಗಿ (ಕ್ರಿಕ್ ಇನ್ಫೋ ಚಿತ್ರ)

ರಾಯ್ ಪುರ: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ದೆಹಲಿ ಆಟ ಮುಗಿದೇ ಹೊಯ್ತು ಎನ್ನುವಷ್ಟರಲ್ಲಿ ಕೊನೆಯ ಎಸೆತದಲ್ಲಿ ರೋಚಕ ಜಯ ದಾಖಲಿಸುವ ಮೂಲಕ ದೆಹಲಿ ಡೇರ್ ಡೆವಿಲ್ಸ್  ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ರಾಯ್ ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡಿದ 159 ರನ್ ಗಳ  ಸವಾಲಿನ ಗುರಿಯನ್ನು ದೆಹಲಿ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 161 ರನ್ ಭಾರಿಸುವ ಮೂಲಕ ರೋಚಕ ಜಯ ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಾಯಕ ಡೇವಿಡ್ ವಾರ್ನರ್ ಅವರ ಅಮೋಘ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್  ನಷ್ಟಕ್ಕೆ 158 ರನ್ ಗಳನ್ನು ಗಳಿಸಿತು. ಹೈದರಾಬಾದ್ ತಂಡದ ಪರ ಡೇವಿಡ್ ವಾರ್ನರ್ ಅಬ್ಬರಿಸಿದ್ದು ಬಿಟ್ಟರೆ ಬೇರಾವ ಆಟಗಾರರೂ ಕೂಡ 20 ರನ್ ಗಳ ಗಡಿಯನ್ನೇ ದಾಟಿಲ್ಲ. ಇದು  ಹೈದರಾಬಾದ್ ತಂಡದ ಬೃಹತ್ ಮೊತ್ತದ ಕನಸಿಗೆ ಪೆಟ್ಟು ನೀಡಿತು. ಧವನ್ (10), ಹೂಡಾ (01), ಯುವರಾಜ್ ಸಿಂಗ್ (10), ಹೆನ್ರಿಕ್ಸ್ (18) ಹೀಗೆ ಮಧ್ಯಮ ಕ್ರಮಾಂಕದ ಯಾವೊಬ್ಬ ಬ್ಯಾಟ್ಸಮನ್  ಕೂಡ ವೈಯುಕ್ತಿಕ 20 ರನ್ ಗಳ ಗಡಿ ದಾಟಲಿಲ್ಲ. ಇದು ಹೈದರಾಬಾದ್ ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಭರ್ಜರಿ 73 ರನ್ ಗಳಿಸಿದ ವಾರ್ನರ್ ತಂಡ 150 ಗಡಿ ದಾಟುವಂತೆ  ನೋಡಿಕೊಂಡರು. ಅಂತಿಮವಾಗಿ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.

ದೆಹಲಿ ಪರ ಕಾಲ್ಟರ್ ನೈಲ್ ಮತ್ತು ಜೆಪಿ ಡುಮಿನಿ ತಲಾ 1 ವಿಕೆಟ್ ಗಳಿಸಿದರೆ, ಬ್ರಾಥ್ ವೇಟ್ 2 ವಿಕೆಟ್ ಪಡೆದು ಮಿಂಚಿದರು. ಹೈದರಾಬಾದ್ ನೀಡಿದ 159 ರನ್ ಗಳ ಸವಾಲಿನ ಬೆನ್ನುಹತ್ತಿದ  ದೆಹಲಿಗೆ ಆರಂಭಿಕ ಆಘಾತ ಎದುರಾಗಿತ್ತು. 2 ರನ್ ಗಳಿಸಿದ್ದ ಡಿಕಾಕ್ ಸ್ರಾನ್ ಬೌಲಿಂಗ್ ನಲ್ಲಿ ಔಟ್ ಆದರು. ಆಗ ನಾಯರ್ ಜೊತೆ ಗೂಡಿದ ಪಂತ್ ಎರಡನೇ ವಿಕೆಟ್ ಭರ್ಜರಿ ಅರ್ಧಶತಕದ  ಜೊತೆಯಾಟ ನೀಡಿದರು. ಪಂತ್ 32 ರನ್ ಗಳಿಸಿ ರನ್ ಔಟ್ ಆದರೆ, ಬಳಿಕ ಬಂದ ಡುಮಿನಿ 17 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಬಂದ ಬ್ರಾಥ್ ವೇಟ್ ಕೂಡ 10 ರನ್ ಗಳಿಸಿ ಔಟ್ ಆಗುವುದರೊಂದಿಗೆ ದೆಹಲಿ ತಂಡ ಒತ್ತಡಕ್ಕೆ ಸಿಲುಕಿತ್ತು. ಏಕಾಂಗಿ ಹೋರಾಟ ಪ್ರದರ್ಶಿಸಿದ ಕೆಕೆ ನಾಯರ್ ಅಜೇಯ 83 ರನ್ ಗಳಿಸಿ ದೆಹಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಪ್ರಮುಖವಾಗಿ ಕೊನೆಯ ಓವರ್ ನಲ್ಲಿ ದೆಹಲಿಗೆ ಗೆಲ್ಲಲು 11 ರನ್ ಗಳ ಅವಶ್ಯಕತೆ ಇತ್ತು. ಕ್ರೀಸ್ ನಲ್ಲಿದ್ದ ಸ್ಯಾಮ್ಸನ್ ಮೊದಲ ಎಸೆತದಲ್ಲೇ 2 ರನ್ ಗಳಿಸಿ ದೆಹಲಿ ಗೆಲುವಿನ ಆಸೆಗೆ ನೀರೆರೆದರು.  2ನೇ ಎಸೆತದಲ್ಲಿ ಲೆಗ್ ಬೈ ಮೂಲಕ 1 ರನ್ ಪಡೆದರೆ, ಮೂರು ಮತ್ತು ನಾಲ್ಕು ಎಸೆತಗಳಲ್ಲಿ ಒಂದೊಂದು ರನ್ ಗಳಿಸಲಾಯಿತು. ಈ ಹಂತದಲ್ಲಿ ದೆಹಲಿ ತಂಡ ತೀವ್ರ ಒತ್ತಡದಲ್ಲಿ ಸಿಲುಕಿತು.  ಆದರೆ ಈ ತೀವ್ರ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿದ ಕೆಕೆ ನಾಯರ್, ಐದು ಮತ್ತು ಆರನೇ ಎಸೆತಗಳನ್ನು ಬೌಂಡರಿಗೆ ಅಟ್ಟುವ ಮೂಲಕ ದೆಹಲಿಗೆ ರೋಚಕ ಜಯವನ್ನು ತಂದಿತ್ತರು. ಆ  ಮೂಲಕ ದೆಹಲಿ ಪ್ಲೇ ಆಫ್ ಪ್ರವೇಶಿಸುವ ತನ್ನ ಕನಸನ್ನು ಇನ್ನೂ ಜಿವಂತವಾಗಿರಿಸಿಕೊಂಡಿದೆ.

ಕೊನೆಯವರೆಗೂ ಕ್ರೀಸ್ ನಲ್ಲಿ ನಿಂತು ದೆಹಲಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕೆಕೆ ನಾಯರ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com