ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಸೀಸನ್ 9ರ ಅತ್ಯುತ್ತಮ ಅನ್ವೇಷಣೆ ಎಂದರೆ ಅದು ರಾಯಲ್ ಚಾಲೆಂಜರ್ಸ್ ತಂಡ ಯಜುವೇಂದ್ರ ಚಾಹಲ್ ಎಂದು ಭಾರತ ತಂಡ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಐಪಿಎಲ್ ಸೀಸನ್ 9ರ ಪ್ರತಿಭಾನ್ವೇಷಣೆ ಕುರಿತು ಮಾತನಾಡಿದ ಸುನಿಲ್ ಗವಾಸ್ಕರ್, ಯಾವ ಕ್ರಿಕೆಟಿಗನಿಗೆ ಪ್ರತಿಭೆಯೊಂದಿಗೆ ಕ್ರೀಡಾಮನೋಧರ್ಮ ಕೂಡ ಇರುತ್ತದೆಯೋ ಆತ ಖಂಡಿತ ಉತ್ತಮ ಕ್ರಿಕೆಟಿಗನಾಗಿ ರೂಪುಗೊಳ್ಳುತ್ತಾನೆ. ಚಾಹಲ್ ರಲ್ಲಿ ಅಂತಹ ಪ್ರತಿಭೆ ಖಂಡಿತಾ ಇದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
"ನನ್ನ ಪ್ರಕಾರ ಯಾರಲ್ಲಿ ಪ್ರತಿಭೆಯೊಂದಿಗೆ ಕ್ರೀಡಾ ಮನೋಧರ್ಮವಿರುತ್ತದೆಯೋ ಆತ ಖಂಡಿತಾ ಉತ್ತಮ ಕ್ರೀಡಾ ಪ್ರತಿಭೆಯಾಗಿ ರೂಪುಗೊಳ್ಳುತ್ತಾನೆ. ಆ ಪ್ರಕಾರ ಯಜುವೇಂದ್ರ ಚಾಹಲ್, ರಿಷಬ್ ಪಂತ್ ಹಾಗೂ ಕೃಣಾಲ್ ಪಾಂಡ್ಯ ನನ್ನ ಟಾಪ್ 3 ಆಟಗಾರರಾಗಿದ್ದಾರೆ. ಈ ಮೂವರಲ್ಲಿ ಚಾಹಲ್ ರನ್ನು ನಾನು ಅಗ್ರ ಸ್ಥಾನದಲ್ಲಿ ನಿಲ್ಲಿಸುತ್ತೇನೆ. ಬ್ಯಾಟ್ಸಮನ್ ದೊಡ್ಡ ಹೊಡೆತಕ್ಕೆ ಕೈ ಹಾಕಿದರೆ ಖಂಡಿತಾ ಚಾಹಲ್ ಎದೆಗುಂದುವುದಿಲ್ಲ. ನಂತರದ ಎಸೆತದಲ್ಲೇ ಕಮ್ ಬ್ಯಾಕ್ ಮಾಡಲು ಪ್ರಯತ್ನಿಸುತ್ತಾರೆ. ಐಪಿಎಲ್ ಸೀಸನ್ 9 ರಲ್ಲಿ ನಾನು ಇಂತಹ ಹಲವು ಸಂದರ್ಭಗಳನ್ನು ವೀಕ್ಷಿಸಿದ್ದೇನೆ. ಇದು ಚಾಹಲ್ ರಲ್ಲಿ ನನಗಿಷ್ಟವಾದ ಗುಣ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಪಾಂಡ್ಯಾ ಮತ್ತು ಪಂತ್ ಬಗ್ಗೆ ಮಾತನಾಡಿದ ಗವಾಸ್ಕರ್, ಟೂರ್ನಿಯಲ್ಲಿ ಈ ಇಬ್ಬರು ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇವರಲ್ಲಿ ಒಂದಷ್ಟು ವಿಭಾಗಗಳಲ್ಲಿ ಸುಧಾರಣೆಯಾಗಬೇಕಿದೆ. ಉತ್ತಮ ಸ್ಥಿರ ಪ್ರದರ್ಶನ ನೀಡಿದ್ದರಲ್ಲೇ ಚಾಹಲ್ ಮುಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗವಾಸ್ಕರ್ ಐಪಿಎಲ್-9 XIನಲ್ಲಿ ಚಾಹಲ್ ಗೆ ಸ್ಥಾನ
ಇನ್ನು ಐಪಿಎಲ್-9 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ 11 ಆಟಗಾರರ ಪಟ್ಟಿ ಬಿಡುಗಡೆ ಮಾಡಿರುವ ಗವಾಸ್ಕರ್ ತಂಡದಲ್ಲಿ ಚಾಹಲ್ ರಿಗೆ ಸ್ಥಾನ ನೀಡಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಸನ್ ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್, ಭುವನೇಶ್ವರ್ ಕುಮಾರ್, ಮುಸ್ತಫಿಜುರ್, ಆಶೀಶ್ ನೆಹ್ರಾ, ಪುಣೆ ತಂಡ ಅಜಿಂಕ್ಯಾ ರಹಾನೆ, ಆಸಿಬಿಯ ಎಬಿಡಿವಿಲಿಯರ್ಸ್ ಮತ್ತು ಕೋಲ್ಕತಾದ ಯೂಸುಫ್ ಫಠಾಣ್, ಆಂಡ್ರೆ ರಸೆಲ್ ಗವಾಸ್ಕರ್ XI ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Advertisement