ನವದೆಹಲಿ: ಲೋಧಾ ಸಮಿತಿಯ ಶಿಫಾರಸು ಜಾರಿಗೆ ಸಂಬಂಧಿಸಿದಂತೆ ಗುರುವಾರ ಸುಪ್ರೀಂ ಕೋರ್ಟ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಚಾಟಿ ಬೀಸಿದ್ದು, ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವ ಬಗ್ಗೆ ನಾಳೆಯೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿದೆ.
ಬಿಸಿಸಿಐಗೆ ನೂತನ ಆಡಳಿತ ಮಂಡಳಿ, ಸಿಬ್ಬಂದಿ ನೇಮಕ ಮಾಡುವ ಸಂಬಂಧ ಇಂದು ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಟಿಎಸ್ ಥಾಕೂರ್ ಅವರು, ನಮ್ಮ ಸಮಯ ಹಾಳು ಮಾಡುವುದನ್ನು ನಿಲ್ಲಿಸಿ. ನಾಳೆ ಶಿಫಾರಸುಗಳನ್ನು ಜಾರಿ ಮಾಡುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ, ಇಲ್ಲವೆ ಆದೇಶ ಹೊರಡಿಸುತ್ತೇವೆ ಎಂದಿದ್ದಾರೆ.
ಜಸ್ಟಿಸ್ ಲೋಧಾ ಸಮಿತಿಯ ಎಲ್ಲ ಶಿಫಾರಸ್ಸುಗಳು ಜಾರಿಯಾಗಲೇಬೇಕು ಎಂದು ಹೇಳಿರುವ ನ್ಯಾಯಾಲಯ, ಅದನ್ನು ಹೇಗೆ ಜಾರಿ ಮಾಡಬೇಕು ಎಂಬ ವಿಚಾರದ ಬಗ್ಗೆ ಮಾತ್ರ ಬಿಸಿಸಿಐ ನಿರ್ಧಾರ ಕೈಗೊಳ್ಳಬೇಕು ಎಂದಿದೆ.
ಇದಕ್ಕು ಮುನ್ನ ಬಿಸಿಸಿಐ ರಾತ್ರೋರಾತ್ರಿ 400 ಕೋಟಿ ಹಣವನ್ನು ವರ್ಗಾವಣೆ ಮಾಡುವಂತಿಲ್ಲ. ರಾಜ್ಯ ಕ್ರಿಕೆಟ್ ಸಂಸ್ಥೆಗಳೊಂದಿಗಿನ ಆರ್ಥಿಕ ವ್ಯವಹಾರಗಳು ಕಡ್ಡಾಯವಾಗಿ ಪಾರದರ್ಶಕವಾಗಿರಬೇಕು ಎಂದು ಹೇಳುವ ಮೂಲಕ ಬಿಸಿಸಿಐನ ಖಾತೆಗಳ ಮೇಲೆ ಲೋಧಾ ಸಮಿತಿ ಇರಿಸಿರುವವ ನಿಗಾವನ್ನು ಬೆಂಬಲಿಸಿದೆ.
ಇತ್ತೀಚೆಗಷ್ಟೇ ಜಸ್ಟಿಸ್ ಲೋಧಾ ನೇತೃತ್ವದ ಸಮಿತಿ ಬಿಸಿಸಿಐನ ಬ್ಯಾಂಕ್ ಖಾತೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವದರ ಮೂಲಕ ಬಿಸಿಸಿಐನ ದೊಡ್ಡ ಪ್ರಮಾಣದ ಹಣ ವರ್ಗಾವಣೆಗೆ ಬ್ರೇಕ್ ಹಾಕಿತ್ತು. ಇದು ಬಿಸಿಸಿಐ ಹಾಗೂ ಲೋಧಾ ಸಮಿತಿಯ ನಡುವಿನ ತಿಕ್ಕಾಟಕ್ಕೆ ಕಾರಣವಾಗಿತ್ತು.