
ಪಳ್ಳೆಕಿಲೆ: ಪಳ್ಳೆಕಿಲೆಯಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಭಾರತಕ್ಕೆ 218 ರನ್ ಗಳ ಸಾಧಾರಣ ಗುರಿ ನೀಡಿದೆ.
ಭಾರತದ ವೇಗೆ ಜಸ್ಪ್ರೀತ್ ಬುಮ್ರಾ ದಾಳಿಗೆ ನಲುಗಿದ ಶ್ರೀಲಂಕಾ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 217 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಶ್ರೀಲಂಕಾ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು. ಆದರೆ ಲಂಕಾಗೆ ಮೊದಲ ಆಘಾತ ನೀಡಿದ ಬುಮ್ರಾ 13 ರನ್ ಗಳಿಸಿದ್ದ ಡಿಕ್ ವೆಲ್ಲಾ ಅವರನ್ನು ಎಲ್ ಬಿ ಬಲೆಗೆ ಕೆಡವಿದರು. ಬಳಿಕ ಕ್ರೀಸ್ ಗೆ ಬಂದ ಕುಶಾಲ್ ಮೆಂಡಿಸ್ ಕೂಡ ಬಂದ ದಾರಿಗೆ ಸುಂಕವಿಲ್ಲವೆಂಬಂತೆ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಬಳಿಕ ಚಾಂಡಿಮಲ್ ಜೊತೆಗೂಡಿದ ತಿರುಮಾನ್ನೆ ಶ್ರೀಲಂಕಾ ಇನ್ನಿಂಗ್ಸ್ ಗೆ ಜೀವ ತುಂಬಿದರು. ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತಾದರೂ, 36 ರನ್ ಗಳಿಸಿದ್ದ ಚಾಂಡಿಮಲ್ ರನ್ನು ಪಾಂಡ್ಯಾ ಔಟ್ ಮಾಡಿದರು. ಬಳಿಕ ಬಂದ ಏಂಜಲೋ ಮ್ಯಾಥ್ಯೂಸ್ 11 ರನ್ ಗಳಿಸಿ ಔಟ್ ಆದರು. ಈ ಹೊತ್ತಿಗಾಗಲೇ ಲಾಹಿರು ತಿರುಮಾನ್ನೆ ಅರ್ಧಶತಕ ಗಳಿಸಿದ್ದರು. ಬಳಿಕ ಮತ್ತೆ ಲಂಕಾಗೆ ಬುಮ್ರಾ ಆಘಾತ ನೀಡಿದರು. 80 ರನ್ ಗಳಿಸಿ ಶತಕದತ್ತ ಚಿತ್ತ ನೆಟ್ಟಿದ್ದ ತಿರುಮಾನ್ನೆಗೆ ಬುಮ್ರಾ ಪೆವಿಲಿಯನ್ ದಾರಿ ತೋರಿಸಿದರು.
ತಿರುಮಾನ್ನೆ ವಿಕೆಟ್ ನೊಂದಿಗೆ ಶ್ರೀಲಂಕಾ ದಾಂಡಿಗರ ಪೆವಿಲಿಯನ್ ಪರೇಡ್ ಶುರುವಾಯಿತು. ಕಾಪು ಗಡೇರಾ 14 ರನ್, ಅಕಿಲಾ ಧವಂಜಯ 2 ರನ್, ಸಿರಿವರ್ಧನ 29 ರನ್, ದುಷ್ಮಾಂತ ಚಮೀರಾ 6 ರನ್ ಗಳಿಸಿ ಔಟ್ ಆದರು. ಅಂತಿಮವಾಗಿ ಲಂಕಾ ತಂಡ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ಇನ್ನು ಭಾರತದ ಪರ ಬುಮ್ರಾ 5 ವಿಕೆಟ್ ಕಬಳಿಸಿ ಯಶಸ್ವೀ ಬೌಲರ್ ಎನಿಸಿದರೆ, ಪಾಂಡ್ಯಾ, ಅಕ್ಸರ್ ಪಟೇಲ್ ಹಾಗೂ ಕೇದಾರ್ ಜಾದವ್ ತಲಾ ಒಂದು ವಿಕೆಟ್ ಪಡೆದರು.
Advertisement