ಕ್ರೀಡಾಸ್ಫೂರ್ತಿ ಮರೆತು ಕ್ರಿಕೆಟಿಗರಿಗೆ ಅಪಮಾನ ಮಾಡಿದ ಶ್ರೀಲಂಕಾ ಪ್ರೇಕ್ಷಕರು!

ಭಾರತ ಮತ್ತು ಶ್ರೀಲಂಕಾ ನಡುವಿನ 3ನೇ ಏಕದಿನ ಪಂದ್ಯ ಶ್ರೀಲಂಕಾ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿತ್ತು.
ಅಂಗಳದಿಂದ ಹೊರ ನಡೆಯುತ್ತಿರುವ ಆಟಗಾರರು
ಅಂಗಳದಿಂದ ಹೊರ ನಡೆಯುತ್ತಿರುವ ಆಟಗಾರರು
ಪಳ್ಳೆಕಿಲೆ: ಭಾರತ ಮತ್ತು ಶ್ರೀಲಂಕಾ ನಡುವಿನ 3ನೇ ಏಕದಿನ ಪಂದ್ಯ ಶ್ರೀಲಂಕಾ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿತ್ತು.
ಪಂದ್ಯದ 44ನೇ ಓವರ್ ನಲ್ಲಿ ಸಿರಿವರ್ಧನ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾ 1 ಬೌಂಡರಿ ಹಾಗೂ ಧೋನಿ ಒಂದು ಭರ್ಜರಿ ಸಿಕ್ಸರ್ ಭಾರಿಸುವುದರೊಂದಿಗೆ ಭಾರತ ಗೆಲುವು ಖಚಿತವಾಗಿತ್ತು. ಈ ಹಂತದಲ್ಲಿ ಅಂದರೆ 45ನೇ ಓವರ್ ಆರಂಭಕ್ಕೂ ಮೊದಲೇ ಪ್ರೇಕ್ಷಕರ ಅಂಗಳದಲ್ಲಿದ್ದ  ಶ್ರೀಲಂಕಾ ಅಭಿಮಾನಿಗಳು ಲಂಕಾ ತಂಡ ಹಾಗೂ ಲಂಕಾ ಕ್ರಿಕೆಟಿಗರ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಒಂದು ಹಂತದಲ್ಲಿಯಂತೂ ಪ್ರೇಕ್ಷಕರು ಮೈದಾನದಲ್ಲಿದ್ದ ಆಟಗಾರರತ್ತ ಬಾಟಲಿಗಳನ್ನೂ ತೂರುವ ಮೂಲಕ ಲಂಕಾ ಕ್ರಿಕೆಟಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿ ಅಂಪೈರ್ ಗಳು ಕೆಲಕಾಲ ಆಟವನ್ನು ಸ್ಥಗಿತಗೊಳಿಸಿದ್ದರು. ಅಲ್ಲದೆ ಪ್ರೇಕ್ಷಕರ ಗ್ಯಾಲರಿಯನ್ನು ಸಮಾಧಾನ ಪಡಿಸುವಂತೆ ಭದ್ರತಾ ಸಿಬ್ಬಂದಿಗಳಿಗೆ ಸೂಚಿಸಿದರು. ಭದ್ರತಾ ಸಿಬ್ಬಂದಿಗಳು ಮೈದಾನದ ಸುತ್ತಾ ಪರೇಡ್ ನಡೆಸಿ ಪ್ರೇಕ್ಷಕರನ್ನು ಸಮಾಧಾನಗೊಳಿಸುವ ಪ್ರಯತ್ನ  ಮಾಡಿದರು. ಆದರೆ ಅಷ್ಟು ಹೊತ್ತಿಗಾಗಲೇ ಮೈದಾನದಿಂದ ಬಹುತೇಕ ಪ್ರೇಕ್ಷಕರು ಹೊರಟು ಹೋಗಿದ್ದರು. ಬಳಿಕ ಮೈದಾನದಲ್ಲಿದ್ದ ಬಾಟಲಿಗಳನ್ನು ಸಿಬ್ಬಂದಿಗಳು ತೆರವುಗೊಳಿಸಿದ ಬಳಿಕ ಆಟ ಮತ್ತೆ ಆರಂಭವಾಯಿತು.
ತಮ್ಮ ತಂಡದ ಸೋಲನ್ನು ಅರಗಿಸಿಕೊಳ್ಳಲಾಗದ ಲಂಕಾ ಅಭಿಮಾನಿಗಳು ಈ ರೀತಿ ನಡೆದುಕೊಂಡಿದ್ದು ಮಾತ್ರ ನಿಜಕ್ಕೂ ದುರದೃಷ್ಟಕರ. ಕ್ರಿಕೆಟ್ ನಲ್ಲಿ ಈ ಹಿಂದೆ ಸಾಕಷ್ಟು ಭಾರಿ ಇಂತಹ ಘಟನೆಗಳು ಸಂಭವಿಸಿವೆ. ಭಾರತದ ಪ್ರೇಕ್ಷಕರೂ ಕೂಡ ಭಾರತ ಸೋತಾಗ ಇಂತಹ ವರ್ತನೆ  ತೋರಿದ್ದಾರೆ. ಆದರೆ ಸೋಲುತ್ತಿರುವ ತಂಡಕ್ಕೆ ಬೆಂಬಲ ನೀಡಿ ಸ್ಪೂರ್ತಿಯಾಗಬೇಕಾದ ಅಭಿಮಾನಿಗಳೇ ಈ ರೀತಿ ನಡೆದುಕೊಂಡರೆ ಹೇಗೆ ಎಂಬ ಭಾವನೆ ಕ್ರೀಡಾ ಪ್ರೇಮಿಗಳನ್ನು ಕಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com