ನಮ್ಮ ಬೌಲರ್ ಗಳೇ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಕಾರಣಕರ್ತರು: ಕೊಹ್ಲಿ

ಬ್ಯಾಟಿಂಗ್ ಮಾಡಲು ಪ್ರಶಸ್ತವಾಗಿದ್ದ ಪಿಚ್ ಮೇಲೆ, ಬಾಂಗ್ಲಾದೇಶದ ವಿರುದ್ಧ ೨೦೮ ರನ್ ಗಳ ಭಾರಿ ಜಯ ಸಾಧಿಸಲು ಸಾಧ್ಯವಾಗಿದ್ದಕ್ಕೆ ಭಾರತೀಯ ಬೌಲರ್ ಗಳ ಬಗ್ಗೆ ತಂಡದ ನಾಯಕ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on
ಹೈದರಾಬಾದ್: ಬ್ಯಾಟಿಂಗ್ ಮಾಡಲು ಪ್ರಶಸ್ತವಾಗಿದ್ದ ಪಿಚ್ ಮೇಲೆ, ಬಾಂಗ್ಲಾದೇಶದ ವಿರುದ್ಧ ೨೦೮ ರನ್ ಗಳ ಭಾರಿ ಜಯ ಸಾಧಿಸಲು ಸಾಧ್ಯವಾಗಿದ್ದಕ್ಕೆ ಭಾರತೀಯ ಬೌಲರ್ ಗಳ ಬಗ್ಗೆ ತಂಡದ ನಾಯಕ ವಿರಾಟ್ ಕೊಹ್ಲಿ ಸೋಮವಾರ ಪ್ರಶಂಸೆಯ ಮಳೆಗೈದಿದ್ದಾರೆ. 
"ಬೌಲರ್ ಗಳಿಗೆ ಶ್ರೇಯಸ್ಸು ಸಲ್ಲಬೇಕು, ಇಂತಹ ಪಿಚ್ ಮೇಲೆ ಈ ಫಲಿತಾಂಶಕ್ಕೆ ಕಾರಣಕರ್ತರು ಅವರೇ. ಬ್ಯಾಟಿಂಗ್ ಮಾಡಲು ಈ ವಿಕೆಟ್ ಪ್ರಶಸ್ತವಾಗಿತ್ತು ಮತ್ತು ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡುವಾಗ ವಿಕೆಟ್ ಪಡೆಯಲು ನಾವು ತುಸು ಶಾಂತಿಯಿಂದ ಕಾಯಬೇಕಾಯ್ತು" ಎಂದು ಪಂದ್ಯದ ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಮಾತುಕತೆ ನಡೆಸಿದ ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಇಲ್ಲಿಯವರೆಗೂ ಭಾರತಕ್ಕೆ ೧೯ ಟೆಸ್ಟ್ ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. 
"ಉಮೇಶ್ (ಯಾದವ್), ಭುವಿ (ಭುವನೇಶ್ವರ್ ಕುಮಾರ್) ಮತ್ತು ಇಶಾಂತ್ ಶರ್ಮ ಮೊದಲ ಇನ್ನಿಂಗ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದರು ಎಂಬುದು ನನ್ನ ಅಭಿಮತ ಆದರೆ ಇವರೆಲ್ಲರಲ್ಲಿ ಉಮೇಶ್ ಮುಂಚೂಣಿ ಪ್ರದರ್ಶನ ನೀಡಿದರು" ಎಂದು ಮೊದಲ ಇನ್ನಿಂಗ್ಸ್ ನಲ್ಲಿ ೨೦೪ ರನ್ ಗಳಿಸಿದ್ದಕ್ಕೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದ ನಾಯಕ ಹೇಳಿದ್ದಾರೆ. 
"ತಂಡದಲ್ಲಿ ಒಳ್ಳೆಯ ವೇಗದ ಬೌಲರ್ ಗಳನ್ನು ಹೊಂದಿರುವುದು ಯಾವತ್ತೂ ಒಳ್ಳೆಯದೇ. ಹೊರದೇಶದಲ್ಲಿ ಆಡುವಾಗ ಇದು ಬಹಳ ಸಹಾಯ ಮಾಡುತ್ತದೆ. ನಮ್ಮ ವೇಗದ ಬೌಲರ್ ಗಳು ಪ್ರದರ್ಶನ ನೀಡಿತ್ತುರುವ ರೀತಿಯನ್ನು ಕಂಡು, ರನ್ ಗಳನ್ನು ಗಳಿಸುವುದು ಸುಲಭವಲ್ಲ ಎಂದು ವಿರೋಧಿ ತಂಡಗಳಿಗೆ ತಿಳಿಯುತ್ತದೆ" ಎಂದು ಕೊಹ್ಲಿ ಹೇಳಿದ್ದಾರೆ. 
ಈ ಐದು ದಿನದ ಪಂದ್ಯಗಳ ಜಯಕ್ಕೆ ನಿಜ ಕಾರಣಕರ್ತರು ಬೌಲರ್ ಗಳೇ ಎಂದು ಕೊಹ್ಲಿ ಹೇಳಿದ್ದಾರೆ. "ಸರಿಯಾದ ದೃಷ್ಟಿಯಲ್ಲಿ ಅವರೇ ಪಂದ್ಯಗಳನ್ನು ಗೆದ್ದುಕೊಡುತ್ತಿರುವುದು ಮತ್ತು ತಂಡದಲ್ಲಿ ಇದನ್ನು ನಾವು ಪದೇ ಪದೇ ಹೇಳುತ್ತಿರುತ್ತೇವೆ. ನೀವು ಎಷ್ಟು ಬೇಕೋ ಅಷ್ಟು ರನ್ ಗಳನ್ನು ಗಳಿಸಬಹುದು ಆದರೆ ವಿಕೆಟ್ ಗಳನ್ನು ಪಡೆಯದಿದ್ದರೆ ಟೆಸ್ಟ್ ಪಂದ್ಯವನ್ನು ಗೆಲ್ಲುವುದು ಅಸಾಧ್ಯ" ಎಂದಿರುವ ಸತತ ೧೯ ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಕೊಹ್ಲಿ "ಇದು ನನ್ನಿಂದ ಮಾತ್ರ ಆಗಿರುವುದಲ್ಲ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎಲ್ಲರು ಒಳ್ಳೆಯ ಪ್ರದರ್ಶನವನ್ನು ನೀಡಲು ಹವಣಿಸುತ್ತಾರೆ.
"ನಾವು ತಂಡವಾಗಿ ಒಗ್ಗಟ್ಟಿನಿಂದ ಆಡುತ್ತಿದ್ದೇವೆ ಮತ್ತು ಈ ತಂಡದ ವಿಭಿನ್ನತೆ ಅದೇ. ನೀವು ನೋಡಿದರೆ ೨೦೧೬ ರಲ್ಲಿ ನಾನು ಅತಿ ಹೆಚ್ಚು ರನ್ ಗಳಿಸಿದ್ದೇನೆ ಆದರೆ ಅದಕ್ಕೂ ಮುಂಚಿತವಾಗಿ ೨೦೧೫ ರಲ್ಲಿಯೂ ನಾವು ಸಾಕಷ್ಟು ಪಂದ್ಯಗಳನ್ನು ಗೆದ್ದಿದ್ದೇವೆ. ಆಗ ನಾನು ಅಷ್ಟು ರನ್ ಗಳನ್ನು ಗಳಿಸಲಿಲ್ಲ ಆದರೆ ತಂಡದ ಇತರ ಸದಸ್ಯರು ಸಾಕಷ್ಟು ರನ್ ಗಳನ್ನು ಕಲೆಹಾಕಿದರು. 
"ದೆಹಲಿಯಲ್ಲಿ (ದಕ್ಷಿಣ ಆಫ್ರಿಕಾ ವಿರುದ್ಧ) ಅಜಿಂಕ್ಯ ಅವರ ಎರಡು ಶತಕಗಳು, ಶ್ರೀಲಂಕಾದಲ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಹೀಗೆ ತಂಡಕ್ಕೆ ಅಗತ್ಯ ಬಿದ್ದಾಗ ಆಟಗಾರರು ಅದ್ಭುತ ಪ್ರದರ್ಶನ ನೀಡಿದ ಬಹಳಷ್ಟು ಉದಾಹರಣೆಗಳಿವೆ. ಇದು ಎಲ್ಲಾ ಆಟಗಾರರ ಒಗ್ಗಟ್ಟಿನ ಪ್ರಯತ್ನ" ಎಂದಿದ್ದಾರೆ ಕೊಹ್ಲಿ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com