ನವದೆಹಲಿ: ಐಸಿಸಿ ಟಿ20 ಅಂಧರ ವಿಶ್ವಕಪ್ ಗೆದ್ದ ಟೀಂ ಇಂಡಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಚೇರಿಯಲ್ಲಿ ಅಭಿನಂದಿಸಿದರು.
ಟೀಂ ಇಂಡಿಯಾದ ಎಲ್ಲಾ 17 ಸದಸ್ಯರೊಂದಿಗೆ ಮಾತುಕತೆ ನಡೆಸಿದ ಮೋದಿ, ಅವರ ಕ್ರಿಕೆಟ್ ಭವಿಷ್ಯಕ್ಕೆ ಶುಭ ಹಾರೈಸಿದರು. ಮುಂದೆಯೂ ಹೀಗೆ ಆಡುತ್ತಾ ದೇಶಕ್ಕೆ ಹೆಮ್ಮೆ ತನ್ನಿ ಎಂದು ಹೇಳಿದ್ದಾರೆ. ಇದೇ ವೇಳೆ ತಂಡದ ಇಬ್ಬರು ಕೋಚ್ ಮತ್ತು ಆಟಗಾರರಿಗೆ ತಲಾ 2 ಲಕ್ಷ ಚೆಕ್ ವಿತರಿಸಿದರು.
ಫೆಬ್ರವರಿ 12ರಂದು ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ಸತತ ಎರಡನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಭಾರತ ವಿಶ್ವಚಾಂಪಿಯನ್ ಆಗುತ್ತಿದ್ದಂತೆ ಪ್ರಧಾನಿ ಮೋದಿ ಅವರು ವಿಜೇತರಿಗೆ ತಮ್ಮ ಟ್ವೀಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದರು.
ಅಂಧರ ವಿಶ್ವಕಪ್ ನಲ್ಲಿ ತಂಡ ಅಭೂತಪೂರ್ವ ಸಾಧನೆ ಮಾಡಿದೆ. ಈ ಅದ್ಭುತ ಯಶಸ್ಸಿಗೆ ಆಟಗಾರರನ್ನು ಬೆಂಬಲಿಸಿದ ಎಲ್ಲ ಹೆತ್ತವರು ಮತ್ತು ಕೋಚ್ ಗಳಿಗೆ ನನ್ನ ಅಭಿನಂದನೆಗಳು ಎಂದು ಟ್ವೀಟಿಸಿದ್ದರು.