ಕ್ರಿಕೆಟ್ ನಲ್ಲೂ ಹೆಲ್ಮೆಟ್ ಕಡ್ಡಾಯ; ನಿಯಮ ಪಾಲಿಸದಿದ್ದರೆ ನಿಷೇಧ ಗ್ಯಾರಂಟಿ!

ಬ್ಯಾಟಿಂಗ್ ವೇಳೆ ಹೆಲ್ಮೆಟ್ ಅನ್ನು ಧರಿಸದಿದ್ದರೆ ಅಂತಹ ಕ್ರಿಕೆಟಿಗನಿಗೆ ನಿಷೇಧ ಹೇರಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದುಬೈ: ಬ್ಯಾಟಿಂಗ್ ವೇಳೆ ಪದೇ ಪದೇ ಕ್ರಿಕೆಟಿಗರು ಗಾಯಗೊಳ್ಳುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ನೂತನ ಹೆಲ್ಮೆಟ್ ನಿಯಮಾವಳಿಗಳನ್ನು ಬಿಡುಗಡೆ ಮಾಡಿದ್ದು, ಬ್ಯಾಟಿಂಗ್  ವೇಳೆ ಹೆಲ್ಮೆಟ್ ಅನ್ನು ಧರಿಸದಿದ್ದರೆ ಅಂತಹ ಕ್ರಿಕೆಟಿಗನಿಗೆ ನಿಷೇಧ ಹೇರಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.

ಈ ಮೊದಲೇ ಕ್ರಿಕೆಟಿಗರ ರಕ್ಷಣೆಗೆ ಐಸಿಸಿ ಹೆಲ್ಮೆಟ್ ನಿಯಮಾವಳಿಗಳನ್ನು ರೂಪಿಸಿತ್ತಾದರೂ, 2014 ರ ನವೆಂಬರ್ ನಲ್ಲಿ ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್ ನಲ್ಲಿ ಫಿಲಿಫ್ ಹ್ಯೂಸ್ ಬೌಲರ್ ಎಸೆದ ಬೌನ್ಸರ್ ನಿಂದ ಸಾವನ್ನಪ್ಪಿದ್ದರು. ಈ  ಪ್ರಕರಣದ ಬಳಿಕ ಸುಧೀರ್ಘ ಚರ್ಚೆ ನಡೆಸಿ ಐಸಿಸಿ ತನ್ನ ಹೆಲ್ಮೆಟ್ ನಿಯಮಾವಳಿಗಳಿಗೆ ಒಂದಷ್ಟು ತಿದ್ದುಪಡಿ ತಂದಿದ್ದು, ನೂತನ ನಿಯಮಾವಳಿಯ ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೆಲ್ಮೆಟ್ ಕಡ್ಡಾಯವಾಗಿರಲಿದೆ.  ಬ್ಯಾಟಿಂಗ್ ಮಾಡುವ ಕ್ರಿಕೆಟಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಮತ್ತು ಕ್ರಿಕೆಟಿಗ ಬಳಸುವ ಹೆಲ್ಮೆಟ್ ಮಾತ್ರ ಬ್ರಿಟಿಷ್ ಗುಣಮಟ್ಟದ ಬಿಎಸ್ 7928:2013 ಪ್ರಮಾಣವನ್ನು ತಲುಪಿರಬೇಕು ಎಂದು ಹೇಳಿದೆ.

ಬಿಎಸ್ 7928:2013 ಹೆಲ್ಮೆಟ್ ಗಳನ್ನು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಗ ಕೆಲ ಕ್ರಿಕೆಟಿಗರು ಬಳಕೆ ಮಾಡುತ್ತಿದ್ದು, ಈ ಮಾದರಿಯ ಅಥವಾ ಈ ಗುಣಮಟ್ಟದ ಹೆಲ್ಮೆಟ್ ಗಳನ್ನೇ ಇತರೆ  ಕ್ರಿಕೆಟಿಗಳು ಬಳಕೆ ಮಾಡುವಂತೆ ಐಸಿಸಿ ಸೂಚನೆ ನೀಡಿದೆ. ನೂತನ ಹೆಲ್ಮೆಟ್ ನಿಯಮವನ್ನು ಜನವರಿ 1ರಿಂದ ಜಾರಿಗೆ ಬರುವಂತೆ ಕ್ರಿಕೆಟ್ ವಸ್ತ್ರ ಸಂಹಿತೆಯಲ್ಲಿ ಅಳವಡಿಸಲಾಗಿದ್ದು, ಮುಂಬರುವ ಫೆಬ್ರವರಿ 1 ರಿಂದ ಹೆಲ್ಮೆಟ್  ನಿಯಮ ಜಾರಿಗೆ ಬರಲಿದೆ. ಒಂದು ವೇಳೆ ಎರಡು ಬಾರಿ ಆಟಗಾರರು ಹೆಲ್ಮೆಟ್ ನಿಯಮಾವಳಿ ಪಾಲಿಸದೇ ನಿಯಮವನ್ನು ಮುರಿದರೆ ದಂಡ ಹಾಕುವ ಸಾಧ್ಯತೆ ಇದೆ. ಅಂತೆಯೇ ಮೂರನೇ ಬಾರಿ ಮುರಿದರೆ ಒಂದು ಪಂದ್ಯದ  ನಿಷೇಧ ಹೇರಲಾಗುತ್ತದೆ ಎಂದು ಐಸಿಸಿ ತನ್ನ ನಿಯಮಾವಳಿಯಲ್ಲಿ ಎಚ್ಚರಿಕೆ ನೀಡಿದೆ.

ಎಲ್ಲ ಬ್ಯಾಟ್ಸ್​ಮನ್​'ಗಳು ಹೆಲ್ಮೆಟ್ ಧರಿಸುವ ಮೂಲಕ ಸುರಕ್ಷಿತವಾಗಿರ ಬೇಕೆಂಬುದು ಈ ನಿಯಮ ಜಾರಿಗೆ ಕಾರಣ ಎಂದು ಐಸಿಸಿ ಜನರಲ್ ಮ್ಯಾನೇಜರ್ (ಕ್ರಿಕೆಟ್) ಜೆಫ್ ಅಲ್ಲರ್​ಡೈಸ್ ಹೇಳಿದ್ದಾರೆ. ಕಳೆದ ವರ್ಷ ಜೂನ್​'ನಲ್ಲಿ ಐಸಿಸಿ  ಕ್ರಿಕೆಟ್ ಸಮಿತಿ ಹೆಲ್ಮೆಟ್ ಕಡ್ಡಾಯಗೊಳಿಸುವ ಬಗ್ಗೆ ಶಿಫಾರಸು ವರದಿ ಸಲ್ಲಿಕೆ ಮಾಡಿತ್ತು. ಇತ್ತೀಚೆಗಷ್ಟೇ ಬಾಂಗ್ಲಾದೇಶದ ಆಟಗಾರ ಮುಷ್ಫಿಕರ್ ರಹೀಮ್ ಬೌಲರ್ ಎಸೆದ ಬೌನ್ಸರ್ ನಿಂದಾಗಿ ತಲೆಗೆ ಪೆಟ್ಟು ಮಾಡಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com