ಟೀಂ ಇಂಡಿಯಾ ಕೋಚ್ ಕುಂಬ್ಳೆ ಭವಿಷ್ಯ ನಿರ್ಧರಿಸಲು ಸಮಯ ಕೇಳಿದ ಸಿಎಸಿ

ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಅವರನ್ನೇ ಮುಂದುವರೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹೆಚ್ಚು ಸಮಯ ಬೇಕು.
ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ
Updated on
ಲಂಡನ್: ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಅವರನ್ನೇ ಮುಂದುವರೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹೆಚ್ಚು ಸಮಯ ಬೇಕು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಹೇಳಿದೆ.
ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಸಲಹಾ ಸಮಿತಿ ಗುರುವಾರ ರಾತ್ರಿ ಖಾಸಗಿ ಹೋಟೆಲ್ ವೊಂದರಲ್ಲಿ ಸಭೆ ಸೇರಿ ಅನಿಲ್ ಕುಂಬ್ಳೆ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ಮುಂದುವರೆಸುವ ಬಗ್ಗೆ ಚರ್ಚಿಸಿದ್ದಾರೆ. ಮೂವರು ಸದಸ್ಯರ ಪೈಕಿ ಒಬ್ಬರು ಮಾತ್ರ ಕುಂಬ್ಳೆ ಅವರಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಹೆಚ್ಚು ಕಾಲವಕಾಶ ಬೇಕು ಎಂದು ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಅವರಿಗೆ ತಿಳಿಸಿದ್ದಾರೆ.
ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರು ನೀಡಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ, ಸಿಎಸಿ ಗುರುವಾರ ಸಭೆ ಸೇರಿ, ಭಾರತ ತಂಡದ ಮುಖ್ಯ ಕೋಚ್ ಆಯ್ಕೆ ಸಂಬಂಧ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದು, ಸೂಕ್ತ ಸಮಯದಲ್ಲಿ ಬಿಸಿಸಿಐಗೆ ತಿಳಿಸುವುದಾಗಿ ಹೇಳಿದೆ.
ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದವರನ್ನು ನಿನ್ನೆ ಸಂದರ್ಶನ ಮಾಡಬೇಕಿತ್ತು. ಆದರೆ ಸಮಿತಿ ಸಂದರ್ಶನ ನಡೆಸಲಿಲ್ಲ. ಈ ಮೂಲಕ 2019ರ ಏಕದಿನ ವಿಶ್ವಕಪ್ ವರೆಗೂ ಕುಂಬ್ಳೆ ಅವರೇ ಕೋಚ್ ಆಗಿ ಮುಂದುವರೆಸಲು ಸಿಎಸಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ
ಬಿಸಿಸಿಐ ಸಹ ಮೊದಲಿಗೆ ಕುಂಬ್ಳೆ ಅವರನ್ನು ಸಂದರ್ಶನ ನಡೆಸಲು ಸಮಿತಿಗೆ ಸೂಚಿಸಿತ್ತು. ಇನ್ನು ಕುಂಬ್ಳೆ ಪರ ಅಸಮಾಧಾನಗೊಂಡಿರುವ ಕೆಲ ಆಟಗಾರರ ಮನವೊಲಿಸಲು ಸಮಿತಿ ಪ್ರಯತ್ನಿಸಿದೆ. ಆದರೆ ಬೇಸರಗೊಂಡಿರುವ ಆಟಗಾರರು ಕುಂಬ್ಳೆ ಅವರು ದರ್ಪದ ನಡೆಯನ್ನು ಬಿಟ್ಟರೆ ಅವರೇ ಕೋಚ್ ಆಗಿ ಮುಂದುವರೆಯುವುದಕ್ಕೆ ನಮ್ಮ ಅಭ್ಯಂತರವೇನು ಇಲ್ಲ ಎಂದು ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com