ಪಾಕ್ ಗೆಲುವಿಗೆ ಮತ್ತೆ ಅಭಿನಂದನೆ ಸಲ್ಲಿಸಿದ ಮಿರ್'ವಾಯಿಜ್ ವಿರುದ್ದ ಗಂಭೀರ್ ಕಿಡಿ
ಚಾಂಪಿಯನ್ಸ್ ಟ್ರೋಫಿ 2017 ಗೆದ್ದ ಪಾಕಿಸ್ತಾನಕ್ಕೆ ಮತ್ತೆ ಅಭಿನಂದನೆ ಸಲ್ಲಿಸಿದ ಕಾಶ್ಮೀರದ ಪ್ರತ್ಯೇಕತಾವಾದಿಗಳ ನಾಯಕ ಮಿರ್ ವಾಯಿಜ್ ಉಮರ್ ಫಾರುಖ್ ವಿರುದ್ಧ ಭಾರತದ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಕಿಡಿಕಾರಿದ್ದಾರೆ...
ನವದೆಹಲಿ: ಚಾಂಪಿಯನ್ಸ್ ಟ್ರೋಫಿ 2017 ಗೆದ್ದ ಪಾಕಿಸ್ತಾನಕ್ಕೆ ಮತ್ತೆ ಅಭಿನಂದನೆ ಸಲ್ಲಿಸಿದ ಕಾಶ್ಮೀರದ ಪ್ರತ್ಯೇಕತಾವಾದಿಗಳ ನಾಯಕ ಮಿರ್ ವಾಯಿಜ್ ಉಮರ್ ಫಾರುಖ್ ವಿರುದ್ಧ ಭಾರತದ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಕಿಡಿಕಾರಿದ್ದಾರೆ.
ನಿನ್ನೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲವು ಸಾಧಿಸಿತ್ತು. ಈ ಹಿನ್ನಲೆಯಲ್ಲಿ ಮಿರ್ ವಾಯಿಜ್ ಅವರು ಅವರು ಪಾಕಿಸ್ತಾನ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು.
ಮಿರ್ ವಾಯಿಜ್ ಅವರು ಪಾಕಿಸ್ತಾನಕ್ಕೆ ಅಭಿನಂದನೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮಿರ್ ವಾಯಿಜ್ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಗಂಭೀರ್ ಅವರು, ಗಂಟು ಮೂಟೆ ಕಟ್ಟಿಕೊಂಡು ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿದ್ದಾರೆ.
ಮಿರ್ ವಾಯಿಜ್ ಅವರಿಗೆ ನನ್ನದೊಂದು ಸಲಹೆ, ನೀವೇಕೆ ಗಡಿಯನ್ನು ದಾಟಬಾರದು? ಚೀನಾ ಕಡೆಯಿಂದ ನಿಮಗೆ ಒಳ್ಳೆಯ ಉಪಚಾರ ಸಿಗುತ್ತದೆ...ಅಲ್ಲಿಯೇ ನೀವು ರಂಜಾನ್ ಹಬ್ಬವನ್ನು ಆಚರಿಸಬಹುದು. ಗಂಟು ಮೂಟೆ ಕಟ್ಟಲು ನಾನೂ ಕೂಡ ನಿಮಗೆ ಸಹಾಯ ಮಾಡುತ್ತೇನೆಂದು ಹೇಳಿದ್ದಾರೆ.