ಭಾರತದ ಬ್ಯಾಟಿಂಗ್ ಅಬ್ಬರಕ್ಕೆ ವಿಂಡೀಸ್ ತತ್ತರ, ಕೊಹ್ಲಿ ಪಡೆಗೆ 105 ರನ್ ಗಳ ಜಯ!

ವಿಂಡೀಸ್ ಪ್ರವಾಸದಲ್ಲಿರುವ ಭಾರತ ತಂಡ ಟೂರ್ನಿಯನ್ನು ಶುಭಾರಂಭ ಮಾಡಿದ್ದು, 2ನೇ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 105 ರನ್ ಗಳ ಭರ್ಜರಿ ಜಯ ದಾಖಲಿಸಿದೆ,
ಕ್ರಿಕ್ ಇನ್ಫೋ ಚಿತ್ರ
ಕ್ರಿಕ್ ಇನ್ಫೋ ಚಿತ್ರ

ಪೋರ್ಟ್ ಆಫ್ ಸ್ಪೈನ್: ವಿಂಡೀಸ್ ಪ್ರವಾಸದಲ್ಲಿರುವ ಭಾರತ ತಂಡ ಟೂರ್ನಿಯನ್ನು ಶುಭಾರಂಭ ಮಾಡಿದ್ದು, 2ನೇ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 105 ರನ್ ಗಳ ಭರ್ಜರಿ ಜಯ ದಾಖಲಿಸಿದೆ,

ಪಂದ್ಯದ ಆರಂಭಕ್ಕೂ ಮೊದಲೇ ಮಳೆ ಬೀಳುತ್ತಿದ್ದರಿಂದ ಪಂದ್ಯದ ಓವರ್ ಗಳ ಪ್ರಮಾಣವನ್ನು ತಲಾ 43 ಓವರ್ ಗಳಿಗೆ ಇಳಿಕೆ ಮಾಡಲಾಯಿತು. ಈ ವೇಳೆ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ  ಮಾಡಿಕೊಂಡಿತು. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ (63 ರನ್) ಹಾಗೂ ಅಂಜಿಕ್ಯ ರಹಾನೆ (103 ರನ್) ಜೋಡಿ ಉತ್ತಮ ಆರಂಭ ಒದಗಿಸಿತು. ಮೊದಲ ವಿಕೆಟ್ ಗೆ ಈ ಜೋಡಿ 114 ರನ್ ಗಳ ಮೊತ್ತ ಕಲೆ  ಹಾಕಿತು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಕೈಹಾಕಿದ ಧವನ್ ನರ್ಸ್ ಬೌಲಿಂಗ್ ನಲ್ಲಿ ಸ್ಟಂಪ್ ಔಟ್ ಆದರು.

ಬಳಿಕ ಕೊಹ್ಲಿ ಜೊತೆ ಗೂಡಿ ರಹಾನೆ ಉತ್ತಮವಾಗಿ ಬ್ಯಾಟ್ ಬೀಸಿದರು. ನೋಡ ನೋಡುತ್ತಿದ್ದಂತೆಯೇ ಶತಕ ಸಿಡಿಸಿದ ರಹಾನೆ ತಂಡದ ಮೊತ್ತ 211 ರನ್ ಗಳಾಗಿದ್ದಾಗ ಕ್ಯುಮಿನ್ಸ್ ಬೌಲಿಂಗ್ ನಲ್ಲಿ ಬೋಲ್ಡ್ ಆದರು. ಅಷ್ಟು  ಹೊತ್ತಿಗಾಗಲೇ ಕೊಹ್ಲಿ ಮತ್ತು ರಹಾನೆ ಜೋಡಿ 97 ರನ್ ಗಳ ಉತ್ತಮ ಜೊತೆಯಾಟವಾಡಿತ್ತು. ಬಳಿಕ ಬಂದ ಪಾಂಡ್ಯಾ 4 ರನ್ ಗಳಿಸಿ ಔಟ್ ಆದರೆ, ಯುವರಾಜ್ ಸಿಂಗ್ 14 ರನ್ ಗಳಿಸಿ ನಿರ್ಗಮಿಸಿದರು. ಕೊಹ್ಲಿ 87 ರನ್ ಗಳಿಸಿದ್ದ ವೇಳೆ  ಜೋಸೆಫ್ ಬೌಲಿಂಗ್ ನಲ್ಲಿ ಔಟ್ ಆದರು. ಇನ್ನಿಂಗ್ಸ್ ಅಂತಿಮ ಹಂತದಲ್ಲಿ ಬಂದ ಧೋನಿ ಮತ್ತು ಜಾಧವ್ ತಲಾ ವೇಗದ 13 ರನ್ ಗಳನ್ನು ಸಿಡಿಸಿ ಭಾರತದ ಮೊತ್ತವನ್ನು 300 ರನ್ ಗಡಿ ದಾಟುವಂತೆ ಮಾಡಿದರು.

ಅಂತಿಮವಾಗಿ ಭಾರತ 43 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಗಳನ್ನು ಪೇರಿಸಿತು.

311 ರನ್ ಗಳ ಬೃಹತ್ ಸವಾಲನ್ನು ಬೆನ್ನು ಹತ್ತಿದ ವಿಂಡೀಸ್ ತಂಡ ಆರಂಭಿಕ ಆಘಾತ ಎದುರಿಸಿತು. ಮೊದಲ ಓವರ್ ನಲ್ಲೇ ಭುವನೇಶ್ವರ್ ಬೌಲಿಂಗ್ ನಲ್ಲಿ ಆರಂಭಿಕರಾದ ಪಾವೆಲ್ ಔಟ್ ಆದರು. ಬಳಿಕ ಕ್ರಮೇಣ ವಿಂಡೀಸ್ ತಂಡ  ವಿಕೆಟ್ ಕಳೆದುಕೊಳ್ಳುತ್ತಾ ಹೊಯಿತು.  ವಿಂಡೀಸ್ ಪರ ಆರಂಭಿಕರಾದ ಹೋಪ್ (81 ರನ್) ಅವರನ್ನು ಹೊರತು ಪಡಿಸಿದರೆ ಉಳಿದಾವ ಬ್ಯಾಟ್ಸಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲಿಲ್ಲ. ಭಾರತದ  ಕುಲದೀಪ್ ಯಾದವ್ ಮತ್ತು ಭುವನೇಶ್ವರ್ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್ ತಂಡ 43 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 205 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಭಾರತ ವಿಂಡೀಸ್ ವಿರುದ್ಧ 105  ರನ್ ಗಳ ಭರ್ಜರಿ ಜಯದಾಖಲಿಸಿದೆ.

ಭಾರತದ ಪರ ಶತಕ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com