ನವದೆಹಲಿ: ಅನಿಲ್ ಕುಂಬ್ಳೆ ಅವರ ರಾಜಿನಾಮೆ ನಂತರ ಭಾರಿ ನಿರೀಕ್ಷೆ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಟೀಂ ಇಂಡಿಯಾ ಕೋಚ್ ಹುದ್ದೆಗೆ ಇದೀಗ ರವಿ ಶಾಸ್ತ್ರಿ ಅವರು ಅರ್ಜಿ ಸಲ್ಲಿಸುತ್ತಿದ್ದು, ಅವರೇ ಎರಡನೇ ಬಾರಿ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.
ನಿನ್ನೆಯಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೋಚ್ ಹುದ್ದೆಗೆ ಮತ್ತಷ್ಟು ಅರ್ಜಿಗಳನ್ನು ಆಹ್ವಾನಿಸಲು ನಿರ್ಧರಿಸಿದ್ದು, ಇದರ ಬೆನ್ನಲ್ಲೇ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ತಾವು ನಿರ್ಧರಿಸಿರುವುದಾಗಿ ರವಿ ಶಾಸ್ತ್ರಿ ಅವರು ಇಂದು ದೂರವಾಣಿ ಮೂಲಕ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಇದೇ ವೇಳೆ ತಾವು ಕೋಚ್ ಹುದ್ದೆ ನೀಡುವ ಭರವಸೆ ನೀಡಿದರೆ ಮಾತ್ರ ಅರ್ಜಿ ಹಾಕುವುದಾಗಿ ಮಾಧ್ಯಮಗಳು ವರದಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ರವಿ ಶಾಸ್ತ್ರಿ ಅವರು, ಅದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ.
ಇದೇ ಮೊದಲ ಬಾರಿಗೆ ಬಹಿರಂಗವಾಗಿ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕುವುದಾಗಿ 55 ವರ್ಷದ ಮಾಜಿ ಆಲ್ ರೌಂಡರ್ ಕ್ರಿಕೆಟಿಗ ರವಿ ಶಾಸ್ತ್ರಿ ಅವರು ಹೇಳಿದ್ದು, ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಕಳೆದ ವರ್ಷ ರವಿ ಶಾಸ್ತ್ರಿ ಅವರನ್ನು ಕೋಚ್ ಹುದ್ದೆಯಿಂದ ತೆಗೆದು ಆ ಸ್ಥಾನಕ್ಕೆ ಒಂದು ವರ್ಷದ ಅವಧಿಗಾಗಿ ಅನಿಲ್ ಕುಂಬ್ಳೆ ಅವರನ್ನು ಬಿಸಿಸಿಐ ನೇಮಕ ಮಾಡಿತ್ತು.