
ನವದೆಹಲಿ: ಲೋಧಾ ಸಮಿತಿ ಶಿಫಾರಸ್ಸು ಜಾರಿ ಮಾಡದ ಹಿನ್ನಲೆಯಲ್ಲಿ ನ್ಯಾಯಾಂಗ ನಿಂದನೆ ತೂಗುಕತ್ತಿ ಎದುರಿಸುತ್ತಿದ್ದ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದು, ವಿಚಾರಣೆಯಲ್ಲಿ ಖುದ್ಧು ಹಾಜರಾತಿಯಿಂದ ವಿನಾಯಿತಿ ನೀಡಿದೆ.
ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಇಂದು ಸುಪ್ರೀಂ ಕೋರ್ಟ್ ಗೆ ಅನುರಾಗ್ ಠಾಕೂರ್ ಕ್ಷಮೆ ಕೋರಿದ ಹಿನ್ನಲೆಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷರ ವಿರುದ್ಧದ ಕಠಿಣ ನಿಲುವನ್ನು ಸುಪ್ರೀಂ ಕೋರ್ಟ್ ಸಡಿಲಗೊಳಿಸಿದೆ. ಮುಂದಿನ ಆದೇಶದವರೆಗೂ ವಿಚಾರಣೆಯಲ್ಲಿ ಖುದ್ಧು ಹಾಜರಾತಿಗೆ ವಿನಾಯಿತಿ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಅಂತೆಯೇ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಏಪ್ರಿಲ್ 17ಕ್ಕೆ ಮುಂದೂಡಿದೆ.
ಲೋಧಾ ಸಮಿತಿ ಶಿಫಾರಸ್ಸುಗಳನ್ನು ಜಾರಿಗೆ ತರುವಂತೆ ಡಿಡಿಸಿಎಗೆ ಸೂಚನೆ
ಇನ್ನು ಇದೇ ವೇಳೆ ದೆಹಲಿ ಕ್ರಿಕೆಟ್ ಮಂಡಳಿಗೂ ಹಲವು ನಿರ್ದೇಶನಗಳನ್ನು ನೀಡಿರುವ ಸುಪ್ರೀಂ ಕೋರ್ಟ್, ನೂತನವಾಗಿ ನೇಮಕವಾಗಿರುವ ದೆಹಲಿ ಕ್ರಿಕೆಟ್ ಮಂಡಳಿಯ ಆಡಳಿತ ವರ್ಗ ಕೂಡಲೇ ಲೋಧ ಸಮಿತಿ ಶಿಫಾರಸ್ಸುಗಳನ್ನು ಜಾರಿಗೆ ತರುವಂತೆ ನಿರ್ದೇಶನ ನೀಡಿದೆ.
ಕಳೆದ ಜನವರಿ 2ರಂದು ನಡೆದಿದ್ದ ವಿಚಾರಣೆ ವೇಳೆ ಆ್ಯಮಿಕಸ್ ಕ್ಯೂರಿ ಗೋಪಾಲ್ ಸುಬ್ರಮಣಿಯನ್ ಮಾಡಿದ್ದ ನ್ಯಾಯಾಂಗ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೆ ಬಿಸಿಸಿಐ ಆಡಳಿತದಲ್ಲಿ ಪಾರದರ್ಶಕತೆ ತರದೇ ಲೋಧಾ ಸಮಿತಿ ಶಿಪಾರಸ್ಸುಗಳನ್ನು ಅಳವಡಿಸದ ಹಿನ್ನಲೆಯಲ್ಲಿ ಅನುರಾಗ್ ಠಾಕೂರ್ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಮತ್ತು ಅಜಯ್ ಶಿರ್ಕೆ ಅವರನ್ನು ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿತ್ತು.
Advertisement