ಬುರ್ಕಾ, ಹಿಜಾಬ್ ಧರಿಸಿ ಮೈದಾನಕ್ಕಿಳಿಯುವ ಮುಸ್ಲಿಂ ಯುವತಿಯರು!

ಬುರ್ಕಾ ಮತ್ತು ಹಿಜಾಬ್ ತೊಟ್ಟ ಮುಸಲ್ಮಾನ ಯುವತಿಯರು ಸಾಮಾನ್ಯವಾಗಿ ಮನೆಯಿಂದ ಹೊರಹೋಗಿ ...
ಬರಮುಲ್ಲಾ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬುರ್ಕಾ, ಹಿಜಾಬ್ ತೊಟ್ಟು ಕ್ರಿಕೆಟ್ ಆಡುತ್ತಿರುವ ಯುವತಿಯರು
ಬರಮುಲ್ಲಾ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬುರ್ಕಾ, ಹಿಜಾಬ್ ತೊಟ್ಟು ಕ್ರಿಕೆಟ್ ಆಡುತ್ತಿರುವ ಯುವತಿಯರು
ಬರಮುಲ್ಲಾ(ಜಮ್ಮು): ಬುರ್ಕಾ ಮತ್ತು ಹಿಜಾಬ್ ತೊಟ್ಟ ಮುಸಲ್ಮಾನ ಯುವತಿಯರು ಸಾಮಾನ್ಯವಾಗಿ ಮನೆಯಿಂದ ಹೊರಹೋಗಿ ಎಲ್ಲರೊಡನೆ ಬೆರೆಯುವುದು ಕಡಿಮೆ. ಆದರೆ ಜಮ್ಮು-ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ಈ ಯುವತಿಯರು ಇದಕ್ಕೆ ಅಪವಾದ. ತಮ್ಮ ಧರ್ಮದಲ್ಲಿ ಇರುವ ಸಂಪ್ರದಾಯದಂತೆ ಬುರ್ಕಾ, ಹಿಜಾಬ್ ಧರಿಸುತ್ತಿದ್ದರೂ ಬ್ಯಾಟ್, ಬಾಲ್ ಹಿಡಿದುಕೊಂಡು ಮೈದಾನಕ್ಕಿಳಿಯುತ್ತಾರೆ. ಪುರುಷರಂತೆ ಕ್ರಿಕೆಟ್ ಆಡಿ ಎಲ್ಲರನ್ನು ಬೆರಗುಗೊಳಿಸುತ್ತಾರೆ.
ಬರಮುಲ್ಲಾ ಸರ್ಕಾರಿ ಮಹಿಳಾ ಕಾಲೇಜಿನ ಕ್ರಿಕೆಟ್ ತಂಡದ ನಾಯಕಿಯಾಗಿರುವ ಇನ್ಶಾ ಉತ್ತರ ಕಾಶ್ಮೀರದ ಉಪ ನಗರ ಪಟ್ಟಣದಲ್ಲಿ ಯುವ ಮಹಿಳೆಯರಲ್ಲಿ ಟ್ರೆಂಡ್ ಸೃಷ್ಟಿಸಿದ್ದಾಳೆ.
ನಾನು ಯಾವುದೇ ಭಯವಿಲ್ಲದೆ ಸ್ವತಂತ್ರ ಜೀವನ ನಡೆಸಬೇಕು ಎನ್ನುತ್ತಾರೆ ಅಂತಿಮ ವರ್ಷದ ಪದವಿಯಲ್ಲಿರುವ 21 ವರ್ಷದ ಇನ್ಶಾ, ಈ ವರ್ಷದ ಅಂತರ ವಿಶ್ವ ವಿದ್ಯಾಲಯ ಕ್ರಿಕೆಟ್ ಚಾಂಪಿಯನ್ ಷಿಪ್ ನಲ್ಲಿ ಇವರ ನೇತೃತ್ವದ ತಂಡ ಜಯ ಗಳಿಸಿತ್ತು.
ಅಮೀರ್ ಖಾನ್ ಅವರ ಸತ್ಯಮೇವ ಜಯತೇ ಕಾರ್ಯಕ್ರಮದಿಂದ ಪ್ರೇರಿತಗೊಂಡಿರುವ ಇನ್ಶಾ, ಸಂಪ್ರದಾಯ ಮತ್ತು ತಮ್ಮ ಇಚ್ಛೆಯ ನಡುವೆ ಹೊಂದಾಣಿಕೆ ಮಾಡಿಕೊಂಡು ಕ್ರಿಕೆಟ್ ನ್ನು ಆಡುತ್ತಿದ್ದಾರೆ. 
ಮೊದಲ ಪದವಿ ತರಗತಿಯಲ್ಲಿರುವ ರಬ್ಯಾ ಕೂಡ ಕ್ರಿಕೆಟ್ ಆಟವಾಡುತ್ತಾರೆ. ತಮ್ಮ ಊರಾದ ಬರಮುಲ್ಲಾದಲ್ಲಿ ಬುರ್ಕಾ ತೊಟ್ಟು ಆಟವಾಡಿದರೆ ಶ್ರೀನಗರದಲ್ಲಿ ಆಟವಾಡುವಾಗ ಹಿಜಾಬ್ ನ್ನು ಧರಿಸುತ್ತಾರೆ.
ತಮ್ಮ ಇಸ್ಲಾಮಿಕ್ ಧರ್ಮದ ಪಾಠ ಹೇಳಿಕೊಡುವ ದರ್ಗಾದಲ್ಲಿನ ಶಿಕ್ಷಕರ ಭಾವನೆಗಳಿಗೆ ವಿರುದ್ಧವಾಗಿ ಹೋಗಲು ನನಗೆ ಇಚ್ಛೆಯಿಲ್ಲ ಎನ್ನುತ್ತಾರೆ ರಬ್ಯಾ. ಈಕೆ ದಿನಗೂಲಿ ನೌಕರರ ಮಗಳಾದರೂ ಕ್ರಿಕೆಟ್ ನಲ್ಲಿ ಆಲ್ ರೌಂಡರ್. ಹಳೆಯ ಬರಮುಲ್ಲಾ ಪಟ್ಟಣದ ಜಮಾತ್-ಇ-ಇಸ್ಲಾಮಿಯಾ ಪ್ರಭಾವ ಹೆಚ್ಚಾಗಿರುವ ಊರಿನಿಂದ ಬಂದವಳಾಗಿದ್ದಾಳೆ.
ಇನ್ನು ಇನ್ಶಾಗೆ ಆರಂಭದಲ್ಲಿ ಅವರ ಧರ್ಮದವರು ಸ್ವಲ್ಪ ತುಚ್ಛವಾಗಿ ಮಾತನಾಡುತ್ತಿದ್ದರಂತೆ. ನಂತರ ಹಿಜಾಬ್ ಧರಿಸಿ ಇನ್ಶಾ ಆತ್ಮ ವಿಶ್ವಾಸದಿಂದ ಕ್ರಿಕೆಟ್ ಮೈದಾನಕ್ಕಿಳಿದರು, ಕಾಲೇಜಿಗೆ ಸಹ ಸ್ಕೂಟಿ ಓಡಿಸಿಕೊಂಡು ಹೋಗುತ್ತಾರೆ.
ನನ್ನ ಇದುವರೆಗಿನ ಪ್ರಯಾಣ ಸುಖಕರವಾಗಿರಲಿಲ್ಲ. ಬ್ಯಾಟ್ ಹಿಡಿದುಕೊಂಡು ಮೈದಾನಕ್ಕಿಳಿದರೆ ಜನರು ನನ್ನ ತಂದೆಗೆ ಹೋಗಿ ದೂರು ಹೇಳುತ್ತಿದ್ದರು. ಆದರೆ ನನ್ನ ಕುಟುಂಬದವರು ನನಗೆ ಬೆಂಬಲ ನೀಡಿದರು. ಈಕೆ ಕ್ರಿಕೆಟ್ ಮಾತ್ರವಲ್ಲದೆ ವಾಲಿಬಾಲ್ ಕೂಡ ಆಡುತ್ತಿದ್ದರು.
ಬರಮುಲ್ಲಾದಲ್ಲಿ ಹಣ್ಣಿನ ಅಂಗಡಿ ವ್ಯಾಪಾರ ನಡೆಸುತ್ತಿರುವ ಇನ್ಶಾಳ ತಂದೆ ಬಶೀರ್ ಅಹ್ಮದ್ ಮಿರ್ ತಮ್ಮ ಮಗಳಿಗೆ ಪ್ರೋತ್ಸಾಹ ನೀಡುತ್ತಾರೆ. ತಮ್ಮ ಮಗಳ ಸಾಧನೆ ಬಗ್ಗೆ ಹೆಮ್ಮೆ ಅನಿಸುತ್ತಿದ್ದು ಕ್ರಿಕೆಟ್ ನಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.
ಇನ್ಶಾಗೆ ಗುರ್ದೀಪ್ ಸಾಹೆಬ್ ಮತ್ತು ಶೌಕತ್ ಅಹ್ಮದ್ ತರಬೇತಿ ನೀಡುತ್ತಿದ್ದಾರೆ. ಇಂದು ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಪುರುಷರಿಗೆ ಸಮನಾಗಿ ಸಾಧನೆ ಮಾಡುತ್ತಾರೆ. ಆದರೂ ಕೂಡ ಹೆಣ್ಣು-ಗಂಡು ಮಧ್ಯೆ ಇನ್ನು ಕೂಡ ತಾರತಮ್ಯವೇಕೆ ಉಳಿದಿದೆ ಎಂದು ಇನ್ಶಾ ಪ್ರಶ್ನಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com