'ಅನ್ ಸೋಲ್ಡ್' ಪೂಜಾರಾ ಐಪಿಎಲ್ ಬಿಟ್ಟು ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಭಾಗಿ!

ಐಪಿಎಲ್ ಹರಾಜು ಪ್ರಕ್ರಿಯೆ ಮುಕ್ತಾಯದ ಬೆನ್ನಲ್ಲೇ ಭಾರತ ತಂಡದ ಕ್ರಿಕೆಟಿಗ ಚೇತೇಶ್ವರ ಪೂಜಾರ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.
ಚೇತೇಶ್ವರ ಪೂಜಾರಾ (ಸಂಗ್ರಹ ಚಿತ್ರ)
ಚೇತೇಶ್ವರ ಪೂಜಾರಾ (ಸಂಗ್ರಹ ಚಿತ್ರ)
ನವದೆಹಲಿ: ಐಪಿಎಲ್ ಹರಾಜು ಪ್ರಕ್ರಿಯೆ ಮುಕ್ತಾಯದ ಬೆನ್ನಲ್ಲೇ ಭಾರತ ತಂಡದ ಕ್ರಿಕೆಟಿಗ ಚೇತೇಶ್ವರ ಪೂಜಾರ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.
ಇತ್ತೀಚೆಗಷ್ಟೇ ಐಪಿಎಲ್ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಈ ವೇಳೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದ ಪ್ರಮುಖ ಕ್ರಿಕೆಟಿಗರು ಸೇರಿದಂತೆ ಹಲವು ಖ್ಯಾತನಾಮ ಕ್ರಿಕೆಟಿಗರು ಹರಾಜಾಗದೇ ಉಳಿದಿದ್ದಾರೆ. ಹೀಗೆ ಹರಾಜಾಗದ  ಕ್ರಿಕೆಟಿಗರು ಇದೀಗ ಇತರೆ ಟೂರ್ನ ಮೆಂಟ್ ಗಳತ್ತ ಮುಖ ಮಾಡಿದ್ದು, ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಭಾರತ ತಂಡದ ಕ್ರಿಕೆಟಿಗ ಚೇತೇಶ್ವರ ಪೂಜಾರ ಐಪಿಎಲ್ ಹೊರತು ಪಡಿಸಿ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನತ್ತ ಮುಖ  ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಪೂಜಾರ ಯಾರ್ಕ್ ಶೈರ್ ತಂಡದ ಪರವಾಗಿ ಆಡುವ ಕುರಿತು ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಐಪಿಎಲ್ ನಡೆಯುವ ಸಂದರ್ಭದಲ್ಲೇ ಅಂದರೆ ಏಪ್ರಿಲ್ ನಲ್ಲಿ ನಡೆಯಲಿರುವ ಇಂಗ್ಲೆಂಡ್ ಕೌಂಟಿ ಕ್ರಿಕೆಟ್  ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. 2015ರಲ್ಲೂ ಪೂಜಾರಾ ಯಾರ್ಕ್ ಶೈರ್ ತಂಡವನ್ನು ಪ್ರತಿನಿಧಿಸಿದ್ದರು. ಬಳಿಕ ಈ ಬಾರಿ ಐಪಿಎಲ್ ನಲ್ಲಿ ಪೂಜಾರಾ ಸೇಲ್ ಆಗುವ ಭರವಸೆ ಹೊಂದಿದ್ದರು. ಆದರೆ ಯಾವುದೇ ತಂಡ ಅವರನ್ನು ಖರೀದಿ  ಮಾಡಿಲ್ಲ. ಹೀಗಾಗಿ ಪೂಜಾರಾ ಯಾರ್ಕ್ ಶೈರ್ ತಂಡದ ಪರವಾಗಿ ಆಡುವ ಕುರಿತು ಸಹಿ ಹಾಕಿದ್ದಾರೆ.
ಈ ಬಗ್ಗೆ ಕ್ರೀಡಾ ವಾಹಿನಿಯೊಂದಿಗೆ ಮಾತನಾಡಿರುವ ಪೂಜಾರ, ನಾನು 2015ರಲ್ಲಿ ಯಾರ್ಕ್ ಶೈರ್ ಪರ ಆಡುವಾಗ ತಂಡ ಚಾಂಪಿಯನ್ ಆಗಿತ್ತು. ಇದೀಗ ಅದೇ ಹುಮ್ಮಸ್ಸಿನಲ್ಲೇ ತಂಡಕ್ಕೆ ಸೇರ್ಪಡೆಯಾಗಿದ್ದೇನೆ. ಯಾರ್ಕ್ ಶೈರ್  ತಂಡದ ಪರವಾಗಿ ಆಡಲು ತುಂಬ ಕುತೂಹಲದಿಂದ ಇದ್ದೇನೆ ಎಂದು ಹೇಳಿದ್ದಾರೆ.  ಅಲ್ಲದೆ ಪ್ರತೀ ಬಾರಿ ನಾನು ಕೌಂಟಿ ಕ್ರಿಕೆಟ್ ನಲ್ಲಿ ಪಾಲ್ಗೊಂಡಿದಾಗಲೆಲ್ಲಾ ನನ್ನ ಪ್ರದರ್ಶನ ಉತ್ತಮಗೊಂಡಿದೆ. ಇದೇ ವಿಶ್ವಾಸದೊಂದಿಗೆ  ಇಂಗ್ಲೆಂಡ್ ಗೆ ತೆರಳಲು ಸಜ್ಜಾಗಿದ್ದೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com