ಕೊಲಂಬೋ: ನಿಡಹಾಸ್ ಟಿ20 ತ್ರಿಕೋನ ಏಕದಿನ ಸರಣಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ದಾಖಲೆಯ ರನ್ ಚೇಸ್ ಮಾಡುವ ಮೂಲಕ ಜಯಭೇರಿ ಬಾರಿಸಿದೆ.
ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಲಂಕಾ ನೀಡಿದ 215 ರನ್ ಗಳ ಗುರಿಯನ್ನು ಬಾಂಗ್ಲಾದೇಶ ತಂಡ ಇನ್ನು ಎರಡು ಎಸೆತಗಳು ಬಾಕಿ ಇರುವಂತೆಯೇ ಕೇವಲ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಬಾಂಗ್ಲಾದೇಶ ಮಧ್ಯಮ ಕ್ರಮಾಂಕದ ಆಟಗಾರ ಮುಷ್ಫಿಕರ್ ರಹೀಂ ಸ್ಫೋಟಕ ಬ್ಯಾಟಿಂಗ್ (ಅಜೇಯ 72 ರನ್) ನೆರವನಿಂದಾಗಿ ಬಾಂಗ್ಲಾದೇಶ ತಂಡ ಇನ್ನೂ 2 ಎಸೆತಗಳು ಬಾಕಿ ಇರುವಂತೆಯೇ ಗೆಲುವು ತನ್ನದಾಗಿಸಿಕೊಂಡಿತು.
ಶ್ರೀಲಂಕಾದ 215 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶ, ಮುಷ್ಫಿಕರ್ ರಹೀಂ (72 ಅಜೇಯ), ಲಿಟನ್ ದಾಸ್ (43) ಹಾಗೂ ತಮೀಮ್ ಇಕ್ಬಾಲ್ (47) ಅವರ ಬಿರುಸಿನ ಆಟದ ನೆರವಿನೊಂದಿಗೆ ಇನ್ನು 2 ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ದಾಖಲೆ ಬರೆದ ಬಾಂಗ್ಲಾ ಹುಲಿಗಳು
ಇನ್ನು ಇಂದು ಬಾಂಗ್ಲಾದೇಶ ದಾಖಲೆಯ ರನ್ ಚೇಸ್ ಮಾಡಿದ್ದು, ಇದು ಟಿ-20 ಕ್ರಿಕೆಟ್ ಇತಿಹಾಸದಲ್ಲೇ ನಾಲ್ಕನೇ ಅತಿ ದೊಡ್ಡ ರನ್ ಚೇಸ್ ಆಗಿದೆ. ಈ ಮೂಲಕ ಬಾಂಗ್ಲಾ ಹುಲಿಗಳು ಇತಿಹಾಸದ ಪುಟ ಸೇರಿದ್ದಾರೆ. ಅಂತೆಯೇ ಇದರೊಂದಿಗೆ ಅಂಕಪಟ್ಟಿಯಲ್ಲಿ ಖಾತೆ ತೆರೆದುಕೊಂಡಿದೆ. ಇದೀಗ ಮೊದಲ ಸುತ್ತಿನ ಪಂದ್ಯಗಳ ಬಳಿಕ ಎಲ್ಲ ಮೂರು ತಂಡಗಳು ಸಮಾನ ಅಂಕಗಳನ್ನು ಹಂಚಿಕೊಂಡಂತಾಗಿದೆ.