ಏಷ್ಯಾಕಪ್ 2018: ಸೂಪರ್ 4 ಹಂತದ ವೇಳಾಪಟ್ಟಿಗೆ ಬಾಂಗ್ಲಾ ತೀವ್ರ ಅಸಮಾಧಾನ

ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2018 ಟೂರ್ನಿಯ ವೇಳಾಪಟ್ಟಿಗೆ ಸಂಬಂಧಿಸಿದಂತೆ ಈ ಹಿಂದೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಈ ಪಟ್ಟಿಗೆ ಬಾಂಗ್ಲಾದೇಶ ಕೂಡ ಸೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ದುಬೈ: ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2018 ಟೂರ್ನಿಯ ವೇಳಾಪಟ್ಟಿಗೆ ಸಂಬಂಧಿಸಿದಂತೆ ಈ ಹಿಂದೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಈ ಪಟ್ಟಿಗೆ ಬಾಂಗ್ಲಾದೇಶ ಕೂಡ ಸೇರಿದೆ.
ಏಷ್ಯಾಕಪ್ ಟೂರ್ನಿಯ ಲೀಗ್ ಪಂದ್ಯಗಳು ಮುಕ್ತಾಯವಾಗಿದ್ದು, ಇದೀಗ ಎಲ್ಲರ ಚಿತ್ತ ಸೂಪರ್ 4 ಹಂತದತ್ತ ನೆಟ್ಟಿದೆ. ಆದರೆ ಈ ಹಂತದ ವೇಳಾಪಟ್ಟಿ ಕುರಿತು ಬಾಂಗ್ಲಾದೇಶ ಕಿಡಿಕಾರಿದೆ. ಹೌದು.. ಟೂರ್ನಿಯ ಸೂಪರ್ 4  ಹಂತದ ವೇಳಾಪಟ್ಟಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಮುಶ್ರಫೆ ಮೋರ್ತಾಜಾ ಆಕ್ಷೇಪ ವ್ಯಕ್ತಪಡಿಸಿದ್ದು, ನಿಜಕ್ಕೂ ಅವೈಜ್ಞಾನಿಕ ವೇಳಾಪಟ್ಟಿ ಎಂದು ಕಿಡಿಕಾರಿದ್ದಾರೆ. ಭಾರತವೂ ಸೇರಿದಂತೆ ಬಾಂಗ್ಲಾದೇಶಕ್ಕೆ ಸತತ ಪಂದ್ಯಗಳ ಆಯೋಜನೆ ಮಾಡಿರುವುದಕ್ಕೆ ಮೋರ್ತಾಜಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೇಳಾಪಟ್ಟಿಯಂತೆ ಸೂಪರ್ 4 ಹಂತದಲ್ಲಿ ಎ1 ವರ್ಸಸ್ ಬಿ2 ಮತ್ತು ಎ2 ವರ್ಸಸ್ ಬಿ1 ತಂಡಗಳು ಕ್ರಮವಾಗಿ ದುಬೈ ಮತ್ತು ಅಬುದಾಬಿಯಲ್ಲಿ ಪಂದ್ಯಗಳನ್ನಾಡಬೇಕಿದೆ. ಅಂದರೆ ಎ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ ಭಾರತ ಬಿ ಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿರುವ ಆಫ್ಘಾನಿಸ್ತಾದ ವಿರುದ್ಧ ಹೋರಾಡಲಿದೆ. ಅಂತೆಯೇ ಬಿ ಪಟ್ಟಿಯಲ್ಲಿ ಅಗ್ರ ಸ್ಥಾನಿಯಾಗಿರುವ ಬಾಂಗ್ಲಾದೇಶ ಎ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಪಾಕಿಸ್ತಾನವನ್ನು ಅಬುದಾಬಿಯಲ್ಲಿ ಎದುರಿಸಬೇಕಿದೆ.
ಶುಕ್ರವಾರದಿಂದ ಈ ಸೂಪರ್ 4 ಪಂದ್ಯಗಳು ನಡೆಯಲಿದೆ. ಆದರೆ ಗುರುವಾರ ಬಾಂಗ್ಲಾದೇಶ ತಂಡ ಅಬುದಾಬಿಯಲ್ಲಿ ಆಫ್ಘಾನಿಸ್ತಾನ ತಂಡವನ್ನು ಎದುರಿಸುತ್ತಿದ್ದು, ಈ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಅಂದರೆ ಮಾರನೆಯೇ ದಿನ ಶುಕ್ರವಾರದಂದು ಪಾಕಿಸ್ತಾನವನ್ನು ಎದುರಿಸಬೇಕಾಗಬಹುದು. ಗುರಾವರದ ಪಂದ್ಯದಲ್ಲಿ ನಾವು ಸೋತರೆ ಆಗ ನಾವು ಎರಡನೇ ಸ್ಥಾನಕ್ಕೆ ಕುಸಿಯುತ್ತೇವೆ. ಆಗ ನಾವು ಭಾರತದ ವಿರುದ್ಧದ ಪಂದ್ಯಕ್ಕಾಗಿ ದುಬೈಗೆ ತೆರಳಬೇಕು. ರಾತ್ರಿ ಪಂದ್ಯ ಮುಕ್ತಾಯವಾಗುತ್ತಿದ್ದಂತೆಯೇ ಅಬುದಾಬಿಗೆ ತೆರಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇದು ನಿಜಕ್ಕೂ ಆಟಗಾರರಿಗೆ ತೊಂದರೆಯಾಗುತ್ತದೆ ಎಂದು ಮೋರ್ತಾಜಾ ಅಭಿಪ್ರಾಯಪಟ್ಟಿದ್ದಾರೆ.
ವೇಳಾಪಟ್ಟಿ ತಯಾರಿಸುವಾಗ ಆಯೋಜಕರು ಇವೆಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡಿರಬೇಕು. ಈ ವೇಳಾ ಪಟ್ಟಿಯ ಅನ್ವಯ ಆಟಗಾರರಿಗೆ ವಿಶ್ರಾಂತಿ ಇರಲಿ, ಅಭ್ಯಾಸಕ್ಕೂ ಸಮಯಾವಕಾಶವಿರುವುದಿಲ್ಲ. ನಿಜಕ್ಕೂ ವೇಳಾಪಟ್ಟಿ ನಿರಾಸೆ ಮೂಡಿಸಿದೆ ಎಂದು ಮೋರ್ತಾಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಇಂದು ಅಬುದಾಬಿಯಲ್ಲಿ ಬಾಂಗ್ಲಾದೇಶ ಮತ್ತು ಆಫ್ಗಾನಿಸ್ತಾನ ತಂಡಗಳು ಟೂರ್ನಿಯ ತಮ್ಮ ಕೊನೆಯ ಲೀಗ್ ಪಂದ್ಯವನ್ನಾಡಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com