
ನವದೆಹಲಿ: ರಾಷ್ಟ್ರರಾಜಧಾನಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಹೆಸರನ್ನು ಇತ್ತೀಚಿಗೆ ನಿಧನರಾದ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಲು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಇಂದು ನಿರ್ಧರಿಸಿದೆ.
ಸೆಪ್ಟೆಂಬರ್ 12 ರಂದು ಹೆಸರು ಬದಲಾವಣೆ ಸಮಾರಂಭ ನಡೆಯಲಿದೆ. ಅಂದೇ ಈ ಹಿಂದೆ ಘೋಷಿಸಿದಂತೆ ಕೊಟ್ಲಾದಲ್ಲಿನ ಸ್ಟ್ಯಾಂಡ್ ವೊಂದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಹೆಸರನ್ನು ಇಡಲಾಗುತ್ತಿದೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ, ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಅಶೀಸ್ ನೆಹ್ರಾ, ರಿಷಬ್ ಪಂಥ್ ರೀತಿಯ ಅನೇಕ ಆಟಗಾರರಿಗೆ ಅರುಣ್ ಜೇಟ್ಲಿ ಪ್ರೋತ್ಸಾಹಿಸಿರುವುದಲ್ಲದೇ, ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದರು.
ಅರುಣ್ ಜೇಟ್ಲಿ ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸ್ಟೆಡಿಯಂನ್ನು ದುರಸ್ಥಿಗೊಳಿಸಿ ಆಧುನಿಕ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದರು. ವಿಶ್ವದರ್ಜೆ ಗುಣಮಟ್ಟದ ಡ್ರೆಸಿಂಗ್ ರೂಮ್ ನಿರ್ಮಾಣದ ಜೊತೆಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬಂದು ಪಂದ್ಯ ವೀಕ್ಷಣೆ ಮಾಡುವಂತೆ ಮಾಡಿದ್ದರು ಎಂದು ಅವರು ತಿಳಿಸಿದರು.
ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಕ್ರೀಡಾ ಸಚಿವ ಕಿರಣ್ ರಿಜಿಜು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
Advertisement