ಐಸಿಸಿ ವಿಶ್ವಕಪ್ 2019: ಇಂಗ್ಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್‌ ತಲುಪುವ ತುಡಿತದಲ್ಲಿ ಭಾರತ!

ಸತತ ಎರಡು ಪಂದ್ಯಗಳಲ್ಲಿ ಸೋತು ಅಪಾಯದಂಚಿನಲ್ಲಿರುವ ಆತಿಥೇಯರಿಗೆ ಈ ಪಂದ್ಯ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಐಸಿಸಿ ವಿಶ್ವಕಪ್ 2019: ಇಂಗ್ಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್‌ ತಲುಪುವ ತುಡಿತದಲ್ಲಿ ಭಾರತ!
ಐಸಿಸಿ ವಿಶ್ವಕಪ್ 2019: ಇಂಗ್ಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್‌ ತಲುಪುವ ತುಡಿತದಲ್ಲಿ ಭಾರತ!
Updated on
ಬರ್ಮಿಂಗ್‌ಹ್ಯಾಮ್‌: ಗೆಲುವಿನ ಓಟ ಮುಂದುವರಿಸಿರುವ ಭಾರತ ತಂಡ ಐಸಿಸಿ ವಿಶ್ವಕಪ್‌ ಸೆಮಿಫೈನಲ್‌ಗೆ ಅದ್ಧೂರಿಯಾಗಿ ಪ್ರವೇಶಿಸಲು ಪಣತೊಟ್ಟಿದ್ದು, ನಾಳೆ ಟೂರ್ನಿಯ 38ನೇ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಸೆಣಸಲಿದೆ. ಸತತ ಎರಡು ಪಂದ್ಯಗಳಲ್ಲಿ ಸೋತು ಅಪಾಯದಂಚಿನಲ್ಲಿರುವ ಆತಿಥೇಯರಿಗೆ ಈ ಪಂದ್ಯ ಅತ್ಯಂತ ಮಹತ್ವ ಪಡೆದುಕೊಂಡಿದೆ. 
ಭಾರತ ತಂಡ ಆಡಿರುವ ಆರು ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದು ಬಿಟ್ಟರೆ ಇನ್ನುಳಿದ ಐದೂ ಪಂದ್ಯಗಳಲ್ಲಿ ಗೆಲುವು ಕಂಡಿದೆ. ತನ್ನ ಖಾತೆಯಲ್ಲಿ 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನಾಳೆ ಇಂಗ್ಲೆಂಡ್‌ ವಿರುದ್ಧ ಗೆದ್ದರೆ ಭಾರತ ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲಿದೆ. 
ಮತ್ತೊಂದೆಡೆ ವಿಶ್ವಕಪ್‌ ಗೆಲ್ಲುವ ಫೇವರಿಟ್‌ ತಂಡ ಎಂಬ ಪಟ್ಟವನ್ನು ಇಂಗ್ಲೆಂಡ್‌ ಹೆಚ್ಚು ಅವಧಿ ಉಳಿಸಿಕೊಳ್ಳಲಿಲ್ಲ. ಮಹತ್ವದ ಪಂದ್ಯಗಳಲ್ಲೇ ಸೋಲು ಅನುಭವಿಸಿದೆ. ಆಡಿರುವ ಏಳು ಪಂದ್ಯಗಳಿಂದ ನಾಲ್ಕರಲ್ಲಿ ಗೆದ್ದು, ಇನ್ನುಳಿದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ತನ್ನ ಖಾತೆಯಲ್ಲಿ ಎಂಟು ಅಂಕಗಳನ್ನು ಹೊಂದಿದೆ. 
ಇತ್ತೀಚಿನ ದಾಖಲೆಗಳನ್ನು ಗಮನಿಸಿದರೆ ಇಂಗ್ಲೆಂಡ್‌ ಏಕದಿನ ಮಾದರಿಯಲ್ಲಿ ಉತ್ತಮವಾಗಿದೆ. ನಾಯಕ ಇಯಾನ್‌ ಮಾರ್ಗನ್‌, ಜೋಸ್‌ ಬಟ್ಲರ್‌, ಜಾನಿ ಬೈರ್‌ ಸ್ಟೋ, ಬೆನ್‌ ಸ್ಟೋಕ್ಸ್‌, ಜೊಫ್ರಾ ಆರ್ಚರ್‌ ಅವರನ್ನೊಳಗೊಂಡ ತಂಡ ಎಂಥ ಸವಾಲು ಎದುರಿಸುವ ಸಾಮಾರ್ಥ್ಯವಿದೆ. 
ಸದ್ಯದ ಇಲ್ಲಿನ ಅಂಗಳದಲ್ಲಿ ಪ್ರಕಾಶಮಾನವಾದ ಸೂರ್ಯನ ಬೆಳಕು ಇದ್ದು, ಇಲ್ಲಿನ ಪಿಚ್ ಸಾಮಾನ್ಯಕ್ಕಿಂತ ಹೆಚ್ಚಿನ ತಿರುವು ಹೊಂದಿರುವ ಸಂಭವ ಹೆಚ್ಚಿದೆ. ಹಾಗಾಗಿ, ಜಸ್ಪ್ರಿತ್‌ ಬುಮ್ರಾ ಜತೆ ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಅವರನ್ನೊಳಗೊಂಡ ಬೌಲಿಂಗ್‌ ಪಡೆ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಬಹುದು. ಪಾಕಿಸ್ತಾನ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧವೂ ಆಂಗ್ಲರು ವೈಫಲ್ಯ ಅನುಭವಿಸಿದ್ದರು. 
ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ವೇಗಿ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಇಂಗ್ಲೆಂಡ್‌ ನಾಯಕ ಇಯಾನ್‌ ಮಾರ್ಗನ್‌ ಲೆಗ್‌ ವಿಕೆಟ್‌ ಕಡೆ ಸರಿದು ಆಡಿದ್ದರು. ಇದಕ್ಕೆ ಮಾಜಿ ಆಟಗಾರ ಕೆವಿನ್‌ ಪೀಟರ್ಸನ್‌ ಅವರು ಮಾರ್ಗನ್‌ ಹೆದುರುತ್ತಿದ್ದಾರೆ ಎಂದು ಕುಟುಕಿದ್ದರು. 
ಏನೇ ಆಗಲಿ ಇಂಗ್ಲೆಂಡ್‌, ಭಾರತದ ವಿರುದ್ಧ ಕಳೆದ ದ್ವಿಪಕ್ಷೀಯ ಸರಣಿಯಲ್ಲಿ 2-1 ಅಂತರದಲ್ಲಿ ಗೆದ್ದಿತ್ತು. ಈ ಗೆಲುವಿನ ವಿಶ್ವಸದಲ್ಲಿ ನಾಳೆ ಭಾರತವನ್ನು ಎದುರಿಸಲಿದೆ. ಆ ಸರಣಿಯಲ್ಲಿ ಗಾಯಾಳು ಬುಮ್ರಾ ಅನುಪಸ್ಥಿಯಲ್ಲಿ ಭಾರತ ಆಂಗ್ಲರ ವಿರುದ್ಧ ಸೋತಿತ್ತು. 
ನಾಳೆ ಇಂಗ್ಲೆಂಡ್‌ ವಿರುದ್ಧ ಕಳೆದ ಪಂದ್ಯವಾಡಿದ ತಂಡವನ್ನೇ ಮುಂದುವರಿಸಬಹುದು. ಭುವನೇಶ್ವರ್‌ ಕುಮಾರ್ ನಾಳಿನ ಪಂದ್ಯದಲ್ಲಿ ಆಡುವ ಬಗ್ಗೆ ಸ್ಪಷ್ಟತೆಯಿಲ್ಲ. ಅವರ ಸ್ಥಾನದಲ್ಲಿ ಮೊಹಮ್ಮದ್‌ ಶಮಿ ಎರಡು ಪಂದ್ಯಗಳಿಂದ 8 ವಿಕೆಟ್‌ ಪಡೆದಿದ್ದಾರೆ. 
ಎದುರಾಳಿ ತಂಡದ ಕಡೆ ನೋಡುವುದಕ್ಕಿಂತ ನಮ್ಮ ಕೌಶಲದ ಕಡೆ ಹೆಚ್ಚು ಕೇಂದ್ರಕರಿಸುವುದು ಒಳಿತು. ನಮ್ಮ ಕೌಶಲ ಉತ್ತಮಮಟ್ಟದಲ್ಲಿದ್ದರೇ ಎದುರಾಳಿ ತಂಡವನ್ನು ನೋಡುವ ಅಗತ್ಯವಿರುವುದಿಲ್ಲ ಎಂದು ಮೊಹಮ್ಮದ್‌ ಶಮಿ ವೆಸ್ಟ್ ಇಂಡೀಸ್‌ ವಿರುದ್ಧದ ಪದ್ಯದ ಬಳಿಕ ತಿಳಿಸಿದ್ದರು. 
ಭಾರತ ತಂಡದ ಬ್ಯಾಟಿಂಗ್‌ ನಾಲ್ಕನೇ ಕ್ರಮಾಂಕ ಮತ್ತೇ ತಲೆ ದೂರಿದೆ. ಶಿಖರ್‌ ಧವನ್‌ ಗಾಯಗೊಂಡು ಟೂರ್ನಿಯಿಂದ ಹೊರ ನಡೆದ ಬಳಿಕ ನಾಲ್ಕನೇ ಕ್ರಮಾಂಕ ಸಮಸ್ಯೆಯಾಗಿದೆ. ಕೆ.ಎಲ್‌ ರಾಹುಲ್‌ ನಾಲ್ಕನೇ ಕ್ರಮಾಂಕದಿಂದ ಆರಂಭಿಕನಾಗಿ ಬಡ್ತಿ ಪಡೆದರು. ಕಳೆದ ಎರಡೂ ಪಂದ್ಯಗಳಲ್ಲಿ ವಿಜಯ್‌ ಶಂಕರ್‌ ನಾಲ್ಕನೇ ಕ್ರಮಾಂಕದಲ್ಲಿ ನಿರೀಕ್ಷೆ ಹುಸಿ ಮಾಡಿದ್ದಾರೆ. 
ಹಾಗಾಗಿ, ನಾಲ್ಕನೇ ಕ್ರಮಾಂಕದಲ್ಲಿ ನಾಳೆ ಯಾರಿಗೆ ಒಲಿಯಲಿದೆ ಎಂದು ತೀವ್ರ ಕುತೂಹಲ ಕೆರಳಿಸಿದೆ. ರಿಷಬ್‌ ಪಂತ್‌ ಅಥವಾ ದಿನೇಶ್‌ ಕಾರ್ತಿಕ್‌ ಅವರಿಗೆ ನೀಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಭಾರತ ನಾಳಿನ ಪಂದ್ಯ ಗೆದ್ದರೆ ಸೆಮಿಫೈನಲ್‌ಗೆ ಪ್ರವೇಶ ಮಾಡಲಿದೆ. ಇಂಗ್ಲೆಂಡ್‌ ಸೋತರೆ ಮಾರ್ಗನ್‌ ಪಡೆಗೆ ಸೆಮಿಫೈನಲ್‌ ಹಾದಿ ಇನ್ನಷ್ಟು ಕಠಿಣವಾಗಲಿದೆ. 
ತಂಡಗಳು
ಭಾರತ: 
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ(ಉಪನಾಯಕ), ಮಹೇಂದ್ರ ಸಿಂಗ್‌ ಧೋನಿ (ವಿ.ಕೀ), ರಿಷಬ್‌ ಪಂತ್‌‌, ಕೆ.ಎಲ್ ರಾಹುಲ್‌, ದಿನೇಶ್‌ ಕಾರ್ತಿಕ್, ಭುವನೇಶ್ವರ್‌ ಕುಮಾರ್‌, ಜಸ್ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ, ಯಜುವೇಂದ್ರ ಚಾಹಲ್‌, ಕುಲ್ದೀಪ್‌ ಯಾದವ್‌, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್, ರವೀಂದ್ರಾ ಜಡೇಜಾ. 
ಇಂಗ್ಲೆಂಡ್‌: 
ಇಯಾನ್‌ ಮಾರ್ಗನ್‌(ನಾಯಕ), ಮೊಯಿನ್‌ ಅಲಿ, ಜೊರ್ಫಾ ಆರ್ಚರ್‌, ಜಾನಿ ಬೈರ್‌ಸ್ಟೋ, ಜೋಸ್‌ ಬಟ್ಲರ್‌(ವಿ.ಕೀ), ಟಾಮ್‌ ಕರ್ರನ್‌, ಲಿಯಾಮ್‌ ಪ್ಲಂಕೆಟ್‌, ಆದಿಲ್‌ ರಶೀದ್‌, ಜೋ ರೂಟ್‌, ಜೇಸನ್‌ ರಾಯ್‌, ಬೆನ್‌ ಸ್ಟೋಕ್ಸ್‌, ಜೇಮ್ಸ್‌ ವಿನ್ಸ್‌, ಕ್ರಿಸ್‌ ವೋಕ್ಸ್‌, ಮಾರ್ಕ್‌ವುಡ್‌. 
ಕೀ ಆಟಗಾರರು:
ಭಾರತ
ಬ್ಯಾಟಿಂಗ್‌: ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ
ಬೌಲಿಂಗ್‌: ಜಸ್ಪ್ರಿತ್‌ ಬುಮ್ರಾ, ಕುಲ್ದೀಪ್‌ ಯಾದವ್‌
ಇಂಗ್ಲೆಂಡ್‌:
ಬ್ಯಾಟಿಂಗ್‌: ಜೋ ರೂಟ್‌, ಬೆನ್ ಸ್ಟೋಕ್ಸ್
ಬೌಲಿಂಗ್‌: ಜೊಫ್ರಾ ಆರ್ಚರ್‌, ಕ್ರಿಸ್‌ ವೋಕ್ಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com