ಐಪಿಎಲ್ 2019: ಕ್ರೀಡಾ ಸ್ಪೂರ್ತಿ ಮರೆತರೇ ಅಶ್ವಿನ್?, ವಿವಾದದ ಕಿಡಿ ಹೊತ್ತಿಸಿದ ಜಾಸ್ ಬಟ್ಲರ್ ರನೌಟ್!

ಯಾವುದೇ ವಿವಾದಗಳಿಲ್ಲದೇ ಆರಂಭವಾಗಿದ್ದ ಐಪಿಎಲ್ ಸೀಸನ್ 12 ನಲ್ಲಿ ಇದೀಗ ವಿವಾದದ ಕಿಡಿಯೊಂದು ಹೊತ್ತಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ವಿರುದ್ಧ ಕ್ರೀಡಾಸ್ಪೂರ್ತಿ ಮರೆತು ಆಡಿದ ಆರೋಪ ಬಂದೆರಗಿದೆ.
ಬಟ್ಲರ್ ರನೌಟ್ ಮಾಡಿದ ಅಶ್ವಿನ್
ಬಟ್ಲರ್ ರನೌಟ್ ಮಾಡಿದ ಅಶ್ವಿನ್
Updated on
ಜೈಪುರ: ಯಾವುದೇ ವಿವಾದಗಳಿಲ್ಲದೇ ಆರಂಭವಾಗಿದ್ದ ಐಪಿಎಲ್ ಸೀಸನ್ 12 ನಲ್ಲಿ ಇದೀಗ ವಿವಾದದ ಕಿಡಿಯೊಂದು ಹೊತ್ತಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ವಿರುದ್ಧ ಕ್ರೀಡಾಸ್ಪೂರ್ತಿ ಮರೆತು ಆಡಿದ ಆರೋಪ ಬಂದೆರಗಿದೆ.
ಹೌದು.. ನಿನ್ನೆ ರಾಜಸ್ಥಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದು, ಭರ್ಜರಿ ಹೋರಾಟದ ಹೊರತಾಗಿಯೂ ರಾಜಸ್ಥಾನ ರಾಯಲ್ಸ್ ತಂಡ 14 ರನ್ ಗಳ ಅಂತರದಲ್ಲಿ ಪಂಜಾಬ್ ವಿರುದ್ದ ಸೋತಿದೆ. ಆದರೆ ಇದೇ ಪಂದ್ಯದಲ್ಲಿ ಹೊಸದೊಂದು ವಿವಾದ ಹುಟ್ಟಿಕೊಂಡಿದ್ದು, ಸೋಮವಾರ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್​ ಹಾಗು ಕಿಂಗ್ಸ್​ ಇಲೆವೆನ್ ಪಂಜಾಬ್ ನಡುವಿನ ಮೊದಲ ಪಂದ್ಯದಲ್ಲಿ, ಜೋಸ್​ ಬಟ್ಲರ್ ಔಟಾದ ರೀತಿ ಈಗ ಕ್ರಿಕೆಟ್​ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. 
ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ವೇಳೆ ಆರಂಭಿಕ ಆಟಗಾರ ಜಾಸ್ ಬಟ್ಲರ್ 69 ರನ್ ಗಳಿಸಿ  ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ನಾನ್ ​ಸ್ಟ್ರೈಕರ್​ ನಲ್ಲಿದ್ದ ಬಟ್ಲರ್​, ಅಶ್ವಿನ್​ ಬೌಲ್​ ಹಾಕುವ ಮೊದಲೇ ಕ್ರೀಸ್​ ಬಿಟ್ಟಿದ್ದರು. ಇದನ್ನ ನೋಡಿದ ಅಶ್ವಿನ್​ ಬಾಲ್​ ಎಸೆಯದೇ ವಿಕೆಟ್​ ಎಗರಿಸಿ 'ಮಾಂಕಡ್​ ರನೌಟ್'​​ಗಾಗಿ ಅಂಪೈರ್​​ ಗೆ ಮನವಿ ಮಾಡಿದರು. ಆದರೆ ಆನ್​ ಫೀಲ್ಡ್ ಅಂಪೈರ್​ ಥರ್ಡ್​ ಅಂಪೈರ್ ​ಗೆ ಮೊರೆ ಹೋದರು. ಥರ್ಡ್​ ಅಂಪೈರ್​​ ಬಟ್ಲರ್​ ಔಟೆಂದು ತೀರ್ಪು ನೀಡಿದರು. ಇದರಿಂದ ಶಾಕ್ ಗೆ ಒ​ಳಗಾದ ಬಟ್ಲರ್​​ ಅಶ್ವಿನ್ ಜೊತೆ ವಾಗ್ವಾದಕ್ಕಿಳಿದರು. ಕೊನೆಗೆ ಬೇರೆ ದಾರಿ ಇಲ್ಲದೆ ಪೆವಿಲಿಯನ್ ​ನತ್ತ ಹೆಜ್ಜೆ ಹಾಕಿದರು.
ಈಗ ಅಶ್ವಿನ್​ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ನೆಗೆಟಿವ್​ ಆಗಿ ಟ್ರೋಲ್​ ಮಾಡಲಾಗುತ್ತಿದ್ದು, ಗೆಲುವಿಗಾಗಿ ಕ್ರೀಡಾಸ್ಫೂರ್ತಿ ಮರೆತು ಅಶ್ವಿನ್​ ಆಡಿದ್ದಾರೆ. ಬೇಕು ಅಂತಲೇ ಬಟ್ಲರ್​ ಕ್ರೀಸ್​ ಬಿಡೋವರೆಗು ಕಾದುನೋಡಿ ಔಟ್​ ಮಾಡಿದ್ದಾರೆ. ಇದು ಟಿವಿ ರೀಪ್ಲೈನಲ್ಲಿ ಕೂಡ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅಭಿಮಾನಿಗಳು ಅಶ್ವಿನ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ಆದರೆ ಅಶ್ವಿನ್ ನಡೆಗೆ ಕೆಲ ಕ್ರಿಕೆಟಿಗರು ಬೆಂಬಲ ನೀಡಿದ್ದು, ಅಶ್ವಿನ್ ಮಾಡಿದ್ದರಲ್ಲಿ ತಪ್ಪಿಲ್ಲ. ಇಲ್ಲಿ ಯಾವುದೇ ಕ್ರೀಡಾ ಸ್ಪೂರ್ತಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕ್ರಿಕೆಟ್ ನಿಯಮದ ಪ್ರಕಾರ ಇದು ಔಟ್ ಅಷ್ಟೇ ಎಂದು ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಹೇಳಿದ್ದಾರೆ. ಇದೇ ರೀತಿಯಲ್ಲೇ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಟ್ವೀಟ್ ಮಾಡಿದ್ದು ನಿಯಮಾವಳಿಗಳ ಅಡಿಯಲ್ಲಿ ಆಡುವುದು ಕ್ರೀಡಾಸ್ಪೂರ್ತಿ ರಹಿತ ಹೇಗಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಅಂತೆಯೇ ದಿನೇಶ್ ಕಾರ್ತಿಕ್ ಕೂಡ ಅಶ್ವಿನ್ ಬೆಂಬಲಕ್ಕೆ ನಿಂತಿದ್ದು, ಯಾವುದೇ ತಂಡದ ಬೌಲರ್ ಆದ್ರೂ ಇಂತಹ ನಡೆಗೆ ನನ್ನ ಬೆಂಬಲವಿದೆ. ನಿಯಮಗಳ ಪ್ರಕಾರ ಬೌಲರ್ ಕೈಯಿಂದ ಬಾಲ್ ರಿಲೀಸ್ ಆಗುವವರೆಗೂ ನಾನ್ ಸ್ಟ್ರೈಕರ್ ಎಂಡ್ ನಲ್ಲಿರುವ ಬ್ಯಾಟ್ಸಮನ್ ಕ್ರೀಸ್ ಬಿಡುವ ಹಾಗಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಆಸಿಸ್ ವೇಗಿ ಮಿಚೆಲ್ ಜಾನ್ಸನ್ ಕೂಡ ಅಶ್ವಿನ್ ಬೆಂಬಲಕ್ಕೆ ನಿಂತಿದ್ದು, ಇದು ಕ್ರಿಕೆಟ್ ನಿಯಮ. ನಿಯಮಗಳಡಿಯಲ್ಲಿ ಆಡುವುದು ಕ್ರೀಡಾಸ್ಪೂರ್ತಿಗೆ ವಿರುದ್ದವಾದದ್ದು ಅಲ್ಲ ಎಂದು ಹೇಳಿದ್ದಾರೆ.
ಇಷ್ಟಕ್ಕೂ ಕ್ರಿಕೆಟ್ ನಿಯಮ ಏನು ಹೇಳುತ್ತದೆ?
ಕ್ರಿಕೆಟ್​ ರೂಲ್ಸ್​ 41.16ರ ಪ್ರಕಾರ ನಾನ್​ಸ್ಟ್ರೈಕ್​ನಲ್ಲಿರುವ ಬ್ಯಾಟ್ಸ್​​​ಮನ್ ಬೌಲರ್​ ಬಾಲ್​ ಬಿಡುವುದಕ್ಕಿಂತ ಮುಂಚೆ ಕ್ರೀಸ್ ಬಿಟ್ಟು ಕದಲಬಾರದು. ಒಂದು ವೇಳೆ ಹಾಗೇನಾದ್ರು ಮಾಡಿದ್ರೆ ಬೌಲರ್​ಗೆ ರನೌಟ್​ ಮಾಡುವ ಅವಕಾಶವಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com