ವಿಶಾಖಪಟ್ಟಣಂ: ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತಿ ವೇಗವಾಗಿ 350 ವಿಕೆಟ್‌ಗಳನ್ನು ಪಡೆಯುವ ಮೂಲಕ ಶ್ರೀಲಂಕಾ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳಿಧರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇಲ್ಲಿನ ಡಾ.ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಟೆಸ್ಟ್ ಪಂದ್ಯದ ಐದನೇ ದಿನ ಅಶ್ವಿನ್ ಈ ಸಾಧನೆ ಮಾಡಿದ್ದಾರೆ. 10 ರನ್ ಗಳಿಸಿ ಆಡುತ್ತಿದ್ದ ಥ್ಯೂನಿಸ್ ಡಿ ಬ್ರೂಯಿನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುತಿದ್ದಂತೆ ಆರ್. ಅಶ್ವಿನ್ ಅವರ ಟೆಸ್ಟ್ ಕ್ರಿಕೆಟ್‌ನಲ್ಲಿ 350ವಿಕೆಟ್ ಮುಡಿಗೇರಿಸಿಕೊಂಡರು.
ಈ ಸಾಧನೆ ಮಾಡಲು ಆರ್. ಅಶ್ವಿನ್ 66 ಪಂದ್ಯಗಳಿಂದ 124 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಮುತ್ತಯ್ಯ ಮುರಳಿಧರ್ ಅವರು 2001ರಲ್ಲಿ ಬಾಂಗ್ಲಾದೇಶ ವಿರುದ್ಧದ 66ನೇ ಪಂದ್ಯದಲ್ಲಿ 350 ವಿಕೆಟ್ ಕಿತ್ತಿದ್ದರು. ಚೆನ್ನೈ ಸ್ಪಿನ್ನರ್ ಇದುವರೆಗೂ 26 ಬಾರಿ ಐದು ವಿಕೆಟ್ ಗೊಂಚಲು ಪಡೆದುಕೊಂಡಿದ್ದಾರೆ. ಮುರಳಿಧರನ್ ಅವರು ವೃತ್ತಿ ಜೀವನದಲ್ಲಿ ಒಟ್ಟು 800 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
Advertisement