ಭಾರತ-ವೆಸ್ಟ್ ಇಂಡೀಸ್: ಪಾದಾರ್ಪಣೆ ಪಂದ್ಯದಲ್ಲೇ ವಿಶಿಷ್ಠ ದಾಖಲೆ ಬರೆದ ವಿಶ್ವದ ದೈತ್ಯ ಆಟಗಾರ ಕಾರ್ನ್‌ವಾಲ್‌

ಟೆಸ್ಟ್ ಕ್ರಿಕೆಟ್‌ ಪಾದಾರ್ಪಣೆ ಪಂದ್ಯದಲ್ಲೇ ವೆಸ್ಟ್ ಇಂಡೀಸ್‌ ತಂಡದ ಆಫ್-ಸ್ಪಿನ್ ಆಲ್ರೌಂಡರ್ ರಹಕೀಮ್ ಕಾರ್ನ್‌ವಾಲ್ ವಿಶಿಷ್ಠ ದಾಖಲೆ ಬರೆದಿದ್ದಾರೆ.
ರಹಕೀಮ್ ಕಾರ್ನ್‌ವಾಲ್
ರಹಕೀಮ್ ಕಾರ್ನ್‌ವಾಲ್

ಜಮೈಕಾ: ಟೆಸ್ಟ್ ಕ್ರಿಕೆಟ್‌ ಪಾದಾರ್ಪಣೆ ಪಂದ್ಯದಲ್ಲೇ ವೆಸ್ಟ್ ಇಂಡೀಸ್‌ ತಂಡದ ಆಫ್-ಸ್ಪಿನ್ ಆಲ್ರೌಂಡರ್ ರಹಕೀಮ್ ಕಾರ್ನ್‌ವಾಲ್ ವಿಶಿಷ್ಠ ದಾಖಲೆ ಬರೆದಿದ್ದಾರೆ.

ಶುಕ್ರವಾರ ಇಲ್ಲಿನ ಸಬೀನಾ ಪಾರ್ಕ್‌ ಅಂಗಳದಲ್ಲಿ ನಡೆದ ಭಾರತದ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ಪರ ಚೊಚ್ಚಲ ಪಂದ್ಯವಾಡಿದ ರಹಕೀಮ್‌ ಕಾರ್ನ್‌ವಾಲ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಹೆಚ್ಚಿನ ತೂಕದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 
6''6 ಅಡಿ ಉದ್ದವಿರುವ ಕಾರ್ನ್‌ವಾಲ್‌ ಅವರ ದೇಹದ ತೂಕ ಸುಮಾರು 140 ಕೆ.ಜಿಯಿದ್ದು, ಆಸ್ಟ್ರೇಲಿಯಾದ ಮಾಜಿ ನಾಯಕ ವಾವ್ರಿಕ್‌ ಆ್ಯಮ್‌ಸ್ಟ್ರಾಂಗ್‌(133-139 ಕೆ.ಜಿ) ಅವರ ದಾಖಲೆಯನ್ನು ಹಿಂದಿಕ್ಕಿದರು. ಆ್ಯಮ್‌ಸ್ಟ್ರಾಂಗ್‌ ಅವರು 1902ರಿಂದ 1921ರ ಅವಧಿಯಲ್ಲಿ ಒಟ್ಟು 50 ಟೆಸ್ಟ್‌ ಪಂದ್ಯಗಳಾಡಿದ್ದಾರೆ. 10 ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಿದ್ದಾರೆ.

26ರ ಪ್ರಾಯದ ಕಾರ್ನ್‌ವಾಲ್‌ ಅವರು 55 ಪ್ರಥಮ ದರ್ಜೆ ಪಂದ್ಯಗಳಿಂದ 260 ವಿಕೆಟ್‌ಗಳು ಹಾಗೂ 2,224 ರನ್‌ ಗಳಿಸಿದ್ದಾರೆ. ವಿಶ್ವದ ಅಗ್ರ ಶ್ರೇಯಾಂಕದ ಭಾರತ ತಂಡದ ವಿರುದ್ಧವೇ ಅವರು ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್‌ಗೆ ಶುಕ್ರವಾರ ಪಾದಾರ್ಪಣೆ ಮಾಡಿದರು. ಟೆಸ್ಟ್ ವಿಶೇಷ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಅವರ ವಿಕೆಟ್‌ ಅನ್ನು ಕಾರ್ನ್‌ವಾಲ್‌ ಪಡೆದಿದ್ದು ವಿಶೇಷ.

ವಿರಾಟ್ ಕೊಹ್ಲಿ ಹಾಗೂ ಮಯಾಂಕ್‌ ಅಗರ್ವಾಲ್‌ ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ಮೊದಲ ದಿನದ ಅಂತ್ಯಕ್ಕೆ ಐದು ವಿಕೆಟ್‌ ಕಳೆದುಕೊಂಡು 264 ರನ್‌ ದಾಖಲಿಸಿದೆ. ಹನುಮ ವಿಹಾರಿ 42 ರನ್‌ ಹಾಗೂ ರಿಷಭ್‌ ಪಂತ್‌ 27 ರನ್‌ ಗಳಿಸಿ ವಿಕೆಟ್‌ ಕಾಯ್ದುಕೊಂಡಿದ್ದಾರೆ. ಜೇಸನ್‌ ಹೋಲ್ಡರ್‌ ಮೂರು ವಿಕೆಟ್‌ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com