2ನೇ ಏಕದಿನ: ರೋಹಿತ್ ಶರ್ಮಾ ಭರ್ಜರಿ ಶತಕ, ದಾಖಲೆ ನಿರ್ಮಾಣ

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ.
ರೋಹಿತ್ ಶತಕ (ಸಂಗ್ರಹ ಚಿತ್ರ)
ರೋಹಿತ್ ಶತಕ (ಸಂಗ್ರಹ ಚಿತ್ರ)

ವಿಶಾಖಪಟ್ಟಣಂ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ.

ವಿಶಾಖಪಟ್ಟಣಂನ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ ಅತ್ಯುತ್ತಮ ಆರಂಭ ಕಂಡಿದ್ದು, ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ. ರೋಹಿತ್ ಶರ್ಮಾಗೆ ಇದು ಏಕದಿನ ವೃತ್ತಿ ಜೀವನದ 28ನೇ ಶತಕವಾಗಿದೆ.

ಆರಂಭದಿಂದಲೂ ವಿಂಡೀಸ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ರೋಹಿತ್ ಶರ್ಮಾ ಕೇವಲ 107 ಎಸೆತಗಳಲ್ಲಿ ಶತಕ ಸಿಡಿಸಿದರು. ಅವರ ಈ ಶತಕದಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಗಳು ಸೇರಿವೆ. 

ದಾಖಲೆ ನಿರ್ಮಾಣ
ಇನ್ನು ರೋಹಿತ್ ಶರ್ಮಾ ತಮ್ಮ ಈ ಶತಕದ ಮೂಲಕ ಹಾಲಿ ಕ್ರಿಕೆಟ್ ವರ್ಷದಲ್ಲಿ ತಮ್ಮ ಶತಕಗಳ ಸಂಖ್ಯೆಯನ್ನು ಏಳಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ 2019ರಲ್ಲಿ ಭಾರತದ ಪರ ಗರಿಷ್ಠ ಶತಕ ಗಳಿಸಿದ ಆಟಗಾರ ಎಂಬ ಕೀರ್ತಿಗೆ ರೋಹಿತ್ ಭಾಜನರಾಗಿದ್ದಾರೆ. ಇನ್ನು 1998ರಲ್ಲಿ ಭಾರತದ ಸಚಿನ್ ತೆಂಡೂಲ್ಕರ್ ಗರಿಷ್ಠ 9 ಶತಕ ಸಿಡಿಸಿದ್ದರು. ಆ ಬಳಿಕ 2000ರಲ್ಲಿ ಸೌರವ್ ಗಂಗೂಲಿ 7 ಶತಕ, 2016ರಲ್ಲಿ ಆಸ್ಚ್ರೇಲಿಯಾದ ಡೇವಿಡ್ ವಾರ್ನರ್ 7 ಶತಕ ಸಿಡಿಸಿದ್ದರು.

ಇನ್ನು ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ 35 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 207 ರನ್ ಗಳಿಸಿದ್ದು, 103 ರನ್ ಗಳಿಸಿರುವ ರೋಹಿತ್ ಶರ್ಮಾ ಮತ್ತು 96 ರನ್ ಗಳಿಸಿರುವ ಕೆಎಲ್ ರಾಹುಲ್ ಆಟವಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com