ಕುಂಬ್ಳೆ ಕೋಚ್ ಆಗಿ ಮುಂದುವರಿಸಲು ನನಗೂ ಇಚ್ಛೆ ಇತ್ತು, ಆದ್ರೆ ಕೊಹ್ಲಿ ಒಪ್ಪಲಿಲ್ಲ: ವಿನೋದ್ ರಾಯ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ನಡುವಿನ ಭಿನ್ನಾಭಿಪ್ರಾಯವನ್ನು ಬಿಸಿಸಿಐ ಆಡಳಿತಗಾರರ ಸಮಿತಿ ಮಾಜಿ ಅಧ್ಯಕ್ಷ ವಿನೋದ್ ರಾಯ್ ಅವರು ಗುರುವಾರ ಬಹಿರಂಗಪಡಿಸಿದ್ದಾರೆ.
ಅನಿಲ್ ಕುಂಬ್ಳೆ - ವಿರಾಟ್ ಕೊಹ್ಲಿ
ಅನಿಲ್ ಕುಂಬ್ಳೆ - ವಿರಾಟ್ ಕೊಹ್ಲಿ

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ನಡುವಿನ ಭಿನ್ನಾಭಿಪ್ರಾಯವನ್ನು ಬಿಸಿಸಿಐ ಆಡಳಿತಗಾರರ ಸಮಿತಿ ಮಾಜಿ ಅಧ್ಯಕ್ಷ ವಿನೋದ್ ರಾಯ್ ಅವರು ಗುರುವಾರ ಬಹಿರಂಗಪಡಿಸಿದ್ದಾರೆ.

ಅನಿಲ್ ಕುಂಬ್ಳೆ ಭಾರತ ಯಶಸ್ವಿ ತರಬೇತುದಾರನಾಗಿದ್ದರು. ಅವರ ಕಾಲಾವಧಿಯನ್ನು ವಿಸ್ತರಿಸಲು ಎಲ್ಲರೂ ಆಸಕ್ತರಾಗಿದ್ದರು. ನನಗೂ ಕುಂಬ್ಳೆ ಬಗ್ಗೆ ಅತೀವ ಗೌರವವಿದ್ದು, ಅವರೇ ಮುಂದುವರಿಯಬೇಕೆಂದು ಬಯಸಿದ್ದೆ. ಆದರೆ ಕುಂಬ್ಳೆ ಅವಧಿಯನ್ನು ವಿಸ್ತರಿಸಲು ಯಾವುದೇ ನಿಯಮಗಳು ಇಲ್ಲದಿದ್ದರಿಂದ ಕ್ರಿಕೆಟ್ ಸಲಹಾ ಸಮಿತಿ ನಿರ್ಣಯಕ್ಕೆ ಬಿಡಲಾಯಿತು ಎಂದು ವಿನೋದ್ ರಾಯ್ ತಿಳಿಸಿದ್ದಾರೆ.

ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಜತೆಗೆ ದೀರ್ಘವಾಧಿಯ ಮಾತುಕತೆಯನ್ನು ನಡೆಸಿದ್ದೆವು. ಆದರೆ ಅನಿಲ್ ಕುಂಬ್ಳೆ ಮುಂದುವರಿಯುವದನ್ನು ವಿರಾಟ್ ಕೊಹ್ಲಿ ಬಯಸಿರಲಿಲ್ಲ. ಹಾಗಾಗಿ ವಿರಾಟ್ ಜತೆ ಚರ್ಚಿಸುವಂತೆ ಸಚಿನ್ ಹಾಗೂ ಸೌರವ್ ಗಂಗೂಲಿಗೆ ಸೂಚಿಸಿದ್ದೆ. ಆದರೆ ಅವರಿಬ್ಬರಿಗೂ ವಿರಾಟ್ ಕೊಹ್ಲಿ ಮನವೊಲಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಕೋಚ್ ಹಾಗೂ ನಾಯಕನ ನಡುವಿನ ಭಿನ್ನಾಭಿಪ್ರಾಯವೇ ಕುಂಬ್ಳೆ ಕೋಚ್ ಸ್ಥಾನದಿಂದ ಕೆಳಗಿಳಿಯಲು ಕಾರಣ. ಆದರೆ ಅಂದು ನನಗೆ ಅವರನ್ನು ಉಳಿಸಿಕೊಳ್ಳುವ ಅಧಿಕಾರವಿರಲಿಲ್ಲ. ನನಗೆ ಅಧಿಕಾರವಿದ್ದಿದ್ದರೆ ಅವರನ್ನು ಕೋಚ್ ಸ್ಥಾನದಲ್ಲಿಯೇ ಉಳಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

33 ತಿಂಗಳ ಕಾಲ ಸಿಒಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ 71 ವರ್ಷದ ವಿನೋದ್ ರಾಯ್ ಅವರು, ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಅಲ್ಲದೆ ಅಂದು ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದರೆ ಬಲವಂತವಾಗಿಯಾದರೂ ಕುಂಬ್ಳೆ ಅವರನ್ನು ಕೋಚ್ ಹುದ್ದೆಯಲ್ಲಿ ಮುಂದುವರಿಸುತ್ತಿದ್ದರು. ಆದರೆ ಅನಿಲ್ ಕುಂಬ್ಳೆ ವಿವಾದ ಉಂಟಾಗುವ ಮೊದಲೇ ಸ್ವತಃ ಕೋಚ್ ಹುದ್ದೆಯನ್ನು ಗೌರವಯುತವಾಗಿ ತೊರೆದರು ಎಂದು ತಿಳಿಸಿದ್ದಾರೆ.

ಈಗ ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ಬಂದಿರುವುದರಿಂದ ಅಂತಹ ಪರಿಸ್ಥಿತಿಗಳು ಮತ್ತೆ ಉದ್ಭವಿಸುವುದಿಲ್ಲ ಎಂಬ ವಿಶ್ವಾಸವಿದೆ. ಗಂಗೂಲಿ ಯಾವುದೇ ವಿಷಯವನ್ನಾದರೂ ಕೂಡ ಡೀಲ್ ಮಾಡುವ ಸಮರ್ಥರಾಗಿದ್ದಾರೆ ಎಂದು ವಿನೋದ್ ರಾಯ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com