ಕೋವಿಡ್ 19: ನಿಧಿ ಸಂಗ್ರಹಕ್ಕೆ ಭಾರತ- ಪಾಕ್ ಮಧ್ಯೆ ಏಕದಿನ ಸರಣಿ, ಅಖ್ತರ್ ಪ್ರಸ್ತಾಪಕ್ಕೆ ಕಪಿಲ್ ದೇವ್ ಏನಂತಾರೆ?

ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ನಿಧಿ ಸಂಗ್ರಹಿಸಲು ಭಾರತ ಮತ್ತು ಪಾಕಿಸ್ತಾನ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜಿಸಬೇಕೆಂಬ ಪಾಕ್ ವೇಗಿ ಶೋಯೆಬ್ ಅಖ್ತರ್ ಅವರ ಯೋಚನೆ ವಿರುದ್ಧ ಭಾರತದ ಲೆಜೆಂಡರಿ ಕಪಿಲ್ ದೇವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ
ಕಪಿಲ್ ದೇವ್, ಶೋಯೆಬ್ ಅಖ್ತರ್
ಕಪಿಲ್ ದೇವ್, ಶೋಯೆಬ್ ಅಖ್ತರ್
Updated on

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ನಿಧಿ ಸಂಗ್ರಹಿಸಲು ಭಾರತ ಮತ್ತು ಪಾಕಿಸ್ತಾನ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜಿಸಬೇಕೆಂಬ ಪಾಕ್ ವೇಗಿ ಶೋಯೆಬ್ ಅಖ್ತರ್ ಅವರ ಯೋಚನೆ ವಿರುದ್ಧ ಭಾರತದ ಲೆಜೆಂಡರಿ ಕಪಿಲ್ ದೇವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ

ಭಾರತಕ್ಕೆ ಹಣದ ಅವಶ್ಯಕತೆ ಇಲ್ಲ, ಕ್ರಿಕೆಟ್ ಪಂದ್ಯಕ್ಕಾಗಿ ಜೀವಕ್ಕೆ ಅಪಾಯ ತಂದುಕೊಳ್ಳುವುದು ಯೋಗ್ಯವಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ 

ಮಾರಕ ಕೊರೋನಾವೈರಸ್ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ನಿಧಿ ಸಂಗ್ರಹಿಸಲು ಭಾರತ ಮತ್ತು ಪಾಕಿಸ್ತಾನ ನಡುವಣ ಖಾಲಿ ಮೈದಾನದಲ್ಲಿ ಏಕದಿನ ಸರಣಿ ಆಯೋಜಿಸಬೇಕೆಂಬ ಪ್ರಸ್ತಾಪನ್ನು ಅಖ್ತರ್ ಬುಧವಾರ ಮಾಡಿದ್ದರು. ಅಖ್ತರ್ ಪ್ರಸ್ತಾಪ ಕಾರ್ಯಸಾಧುವಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಶೋಯೆಬ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅರ್ಹರಾಗಿದ್ದಾರೆ. ಆದರೆ, ನಮಗೆ ನಿಧಿ ಸಂಗ್ರಹಿಸುವ ಅಗತ್ಯವಿಲ್ಲ, ನಮ್ಮಲ್ಲಿ ಸಾಕಷ್ಟು ಹಣವಿದೆ. ಈ ಬಿಕ್ಕಟ್ಟನ್ನು ಎದುರಿಸಲು ನಮ್ಮ ಅಧಿಕಾರಿಗಳು ಹೇಗೆ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬುದು ಪ್ರಮುಖವಾಗಿದೆ. ರಾಜಕಾರಣಿಗಳು ಟಿವಿಗಳಲ್ಲಿ ಆರೋಪ- ಪ್ರತ್ಯಾಪರೋಪಗಳಲ್ಲಿ ತೊಡಗಿರುವುದನ್ನು ನೋಡುತ್ತಿರುತ್ತೇನೆ. ಇಂತಹವುಗಳನ್ನು ನಿಲ್ಲಿಸಬೇಕಾಗಿದೆ ಎಂದು ಕಪಿಲ್ ದೇವ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಬಿಸಿಸಿಐ ಈಗಾಗಲೇ 51 ಕೋಟಿ ನೆರವನ್ನು ನೀಡಿದೆ. ಒಂದು ವೇಳೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದರೆ ಹೆಚ್ಚಿನ ಹೆಚ್ಚಿನ ನೆರವನ್ನು ನೀಡುವಷ್ಟು ಬಿಸಿಸಿಐ ಶಕ್ತವಾಗಿದೆ. ನಿಧಿ ಸಂಗ್ರಹಿಸುವ ಅಗತ್ಯವಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ. 

ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ದೇಶಕ್ಕಿಂತ ಪಂದ್ಯ ದೊಡ್ಡದಲ್ಲ, ಬಡವರು, ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಮತ್ತಿತರ ಕೋವಿಡ್ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ಜನರ ಕಡೆ ಪ್ರಸ್ತುತ ಗಮನ ಹರಿಸಬೇಕಾಗಿದೆ ಎಂದು 61 ವರ್ಷದ ಕಪಿಲ್ ದೇವ್ ಸಲಹೆ ನೀಡಿದ್ದಾರೆ. 

ಅಮೆರಿಕಾ ಸೇರಿದಂತೆ ಇತರ ರಾಷ್ಟ್ರಗಳಿಗೆ ಸಹಾಯ ಮಾಡುವಷ್ಟು ದೇಶ ಶಕ್ತವಾಗಿದೆ. ಮಲೇರಿಯಾ ವಿರೋಧಿ hydroxychloroquine ಔಷಧಿಯನ್ನು ರಫ್ತು ಮಾಡಿದ್ದಕ್ಕಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಬೇರೆ ರಾಷ್ಟ್ರಗಳಿಗೆ ಸಹಾಯ ಮಾಡುವುದು ನಮ್ಮ ಸಂಸ್ಕೃತಿ, ಇದರ ಬಗ್ಗೆ ನನ್ನಗೆ ಹೆಮ್ಮೆಯಾಗುತ್ತಿದೆ. ಇತರರಿಂದ ತೆಗೆದುಕೊಳ್ಳುವ ಬದಲು ಹೆಚ್ಚು ಹೆಚ್ಚು ನೀಡುವ ರಾಷ್ಟ್ರವಾಗಲು ನಾವು ಪ್ರಯತ್ನಿಸಬೇಕು ಎಂದಿರುವ ಕಪಿಲ್ ದೇವ್, ಮನೆಯಲ್ಲಿಯೇ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಜನತೆಗೆ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com