ಏಕದಿನ ಸರಣಿಯಲ್ಲಿ ಚಹಾಲ್‌ ಮಾಡಿದ ತಪ್ಪೇನು? ಮತ್ತೆ ಆ ತಪ್ಪು ಮಾಡಲ್ಲ ಅಂದಿದ್ದೇಕೆ?

ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮಾಡಿದ್ದ ತಪ್ಪನ್ನು ತಿದ್ದಿಕೊಂಡು ಮೊದಲನೇ ಟಿ20ಯಲ್ಲಿ ಬೌಲಿಂಗ್‌ ಮಾಡಿದೆ ಎಂದು ಟೀಂ ಇಂಡಿಯಾದ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ತಿಳಿಸಿದ್ದಾರೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮಾಡಿದ್ದ ತಪ್ಪನ್ನು ತಿದ್ದಿಕೊಂಡು ಮೊದಲನೇ ಟಿ20ಯಲ್ಲಿ ಬೌಲಿಂಗ್‌ ಮಾಡಿದೆ ಎಂದು ಟೀಂ ಇಂಡಿಯಾದ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ತಿಳಿಸಿದ್ದಾರೆ.

ಶುಕ್ರವಾರ ಮನುಕಾ ಓವಲ್ ಕ್ರೀಡಾಂಣದಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ ತಂಡ, ತನ್ನ ಪಾಲಿನ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 161 ರನ್ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಆಸ್ಟ್ರೇಲಿಯಾ ತಂಡ, 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 150 ರನ್‌ಗಳಿಗೆ ಶಕ್ತವಾಗಿತ್ತು. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಸಾಧಿಸಿತು.

ಡೆತ್‌ ಓವರ್‌ಗಳಲ್ಲಿ ಅಬ್ಬರಿಸಿದ ರವೀಂದ್ರ ಜಡೇಜಾ ಕೇವಲ 23 ಎಸೆತಗಳಲ್ಲಿ ಅಜೇಯ 44 ರನ್‌ಗಳನ್ನು ಸಿಡಿಸಿದ್ದರು. ಕೊನೆಯ ಓವರ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ ಎಸೆತದಲ್ಲಿ ಜಡೇಜಾ ತಲೆಗೆ ಚೆಂಡು ತಗುಲಿಸಿಕೊಂಡು ಗಾಯಕ್ಕೆ ತುತ್ತಾಗಿದ್ದರು.

ಗಾಯಕ್ಕೆ ತುತ್ತಾಗಿದ್ದ ಜಡೇಜಾ ಅವರ ಬದಲು ಕನ್ಕಷನ್‌ ಸಬ್‌ಸ್ಟಿಟ್ಯೂಟ್‌ ಆಗಿ ಯುಜ್ವೇಂದ್ರ ಚಹಲ್‌ ಭಾರತದ ಅಂತಿಮ 11ರಲ್ಲಿ ಅನಿರೀಕ್ಷಿತವಾಗಿ ಸ್ಥಾನ ಪಡೆದರು ಹಾಗೂ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಫಿಂಚ್‌ ಹಾಗೂ ಶಾರ್ಟ್ ಮೊದಲನೇ ವಿಕೆಟ್‌ಗೆ 56 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿತ್ತು. ಈ ವೇಳೆ ಚಹಲ್,‌ ಫಿಂಚ್‌ ವಿಕೆಟ್‌ ಕಿತ್ತು ಜತೆಯಾಟವನ್ನು ಮುರಿದರು.

ಅಲ್ಲದೆ, ಭರ್ಜರಿ ಫಾರ್ಮ್‌ನಲ್ಲಿರುವ ಸ್ಟೀವನ್‌ ಸ್ಮಿತ್‌ ಹಾಗೂ ಮ್ಯಾಥ್ಯೂ ವೇಡ್‌ ಅವರ ವಿಕೆಟ್‌ಗಳನ್ನು ಕಬಳಿಸಿ ಭಾರತದ ಗೆಲುವಿನ ಮಹತ್ವದ ಪಾತ್ರವನ್ನು ವಹಿಸಿದ್ದರು. ಇವರಿಗೆ ಅತ್ಯುತ್ತಮ ಸಾಥ್‌ ನೀಡಿದ ಟಿ ನಟರಾಜನ್‌ ಕೂಡ ಕೀ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸೇರಿದಂತೆ ಮೂರು ವಿಕೆಟ್‌ಗಳನ್ನು ಪಡದು, ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದರು.

ಪಂದ್ಯದ ಬಳಿಕ ಮಾತನಾಡಿದ ಯುಜ್ವೇಂದ್ರ ಚಹಲ್‌, "ಭಾರತದ ಇನಿಂಗ್ಸ್‌ ವೇಳೆ ನನ್ನ ಮೇಲೆ ಒತ್ತಡವಿರಲಿಲ್ಲ. ಆದರೆ, ಆಸ್ಟ್ರೇಲಿಯಾ ಇನಿಂಗ್ಸ್‌ಗೂ 15 ನಿಮಿಷಗಳಗೂ ಮುನ್ನ ತಾನು ಜಡೇಜಾ ಬದಲು ಆಡುತ್ತಿರುವ ಬಗ್ಗೆ ಗಮನಕ್ಕೆ ಬಂತು. ಆ ವೇಳೆ ಅತ್ಯುತ್ತಮ ಭಾವನೆ ಉಂಟಾಗಿತ್ತು ಎಂದು ಹೇಳಿಕೊಂಡ ಚಹಲ್‌, ಏಕದಿನ ಸರಣಿಯಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಂಡು, ಯೋಜನೆಗೆ ಅಂಟಿಕೊಂಡಿದ್ದು ಫಲ ನೀಡಿತು ಎಂದರು.

ಟೀಂ ಇಂಡಿಯಾ ಬ್ಯಾಟಿಂಗ್‌ ಮಾಡುವ ವೇಳೆ ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ, ಹಾಗಾಗಿ ಅತ್ಯುತ್ತಮ ಭಾವನೆ ನನ್ನಲ್ಲಿ ಉಂಟಾಗಿತ್ತು. ಆಸ್ಟ್ರೇಲಿಯಾ ಇನಿಂಗ್ಸ್‌ಗೂ 10 ರಿಂದ 15 ನಿಮಿಷಗಳ ಮುನ್ನ ನಾನು ಆಡುತ್ತಿರುವ ವಿಷಯ ಗೊತ್ತಾಯಿತು. ಓಡಿಐ ಸರಣಿಯಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಳ್ಳಲು ನನಗೆ ಅತ್ಯುತ್ತಮ ಅವಕಾಶ ಸಿಕ್ಕಿತು ಎಂದು ಹೇಳಿದರು.

ಏಕದಿನ ಸರಣಿಯಲ್ಲಿ ಚೆಂಡಿಗೆ ಸ್ವಲ್ಪ ಫ್ಲೈಟ್‌ ನೀಡಿ ತಪ್ಪು ಮಾಡಿದ್ದೆ. ಆದರೆ, ಟಿ20 ಪಂದ್ಯದಲ್ಲಿ ಇದನ್ನು ತಿದ್ದಿಕೊಂಡು ಬೌಲಿಂಗ್‌ ಮಾಡಿದೆ. ಮೊದಲನೇ ಇನಿಂಗ್ಸ್‌ನಲ್ಲಿ ಸ್ಪಿನ್ನರ್‌ಗಳಿಗೆ ರನ್‌ ಗಳಿಸುವುದು ಸ್ವಲ್ಪ ಕಷ್ಟ ಹಾಗೂ ನನ್ನ ಯೋಜನೆಗಳಿಗೆ ತಕ್ಕಂತೆ ಬೌಲಿಂಗ್‌ ಮಾಡಿದೆ ಎಂದು ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಚಹಲ್‌ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com