ಐಪಿಎಲ್ ಆತಿಥ್ಯ ವಹಿಸಲು ಯುಎಇ, ಶ್ರೀಲಂಕಾದ ಬಳಿಕ ನ್ಯೂಜೀಲ್ಯಾಂಡ್ ಮುಂದಾಗಿದೆ ಎಂದು ಬಿಸಿಸಿಐ ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಬಾರಿಯ ಐಪೆಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಐಪಿಎಲ್ ನ್ನು ಬೇರೆಡೆಗೆ ಸ್ಥಳಾಂತರಿಸುವ ಅನಿವಾರ್ಯತೆ ಉಂಟಾದಲ್ಲಿ ವಿದೇಶದಲ್ಲಿ ಟೂರ್ನಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.
T20 ವಿಶ್ವಕಪ್ ಟೂರ್ನಿ ಮುಂದೂಡಿಕೆ (ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ ನಡೆಯಬೇಕಿದ್ದ)ಯಾಗಿದ್ದು, ಈಗ ಐಪಿಎಲ್ ನಡೆಯುವುದರ ಬಗ್ಗೆಯೂ ಪ್ರಶ್ನೆಗಳು ಮೂಡಿವೆ. ಐಪಿಎಲ್ ಟೂರ್ನಿ ನಡೆಸುವುದಕ್ಕೆ ಸೆಪ್ಟೆಂಬರ್-ನವೆಂಬರ್ ಪ್ರಾರಂಭದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.
"ಐಪಿಎಲ್ ನಡೆಸಲು ಭಾರತವೇ ಮೊದಲ ಆದ್ಯತೆಯಾಗಿದೆ. ಅದರೆ ಕೊರೋನಾ ಪ್ರಕರಣಗಳು ಹೆಚ್ಚಿದ್ದರೆ, ವಿದೇಶಗಳಲ್ಲಿ ನಡೆಸುವ ಆಯ್ಕೆಯನ್ನು ಪರಿಗಣಿಸಲಾಗುತ್ತಿದೆ, ಯುಎಇ ಹಾಗೂ ಶ್ರೀಲಂಕಾದ ಬಳಿಕ ನ್ಯೂಜಿಲ್ಯಾಂಡ್ ಸಹ ಆತಿಥ್ಯ ವಹಿಸಲು ಆಸಕ್ತಿ ತೋರಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐ ಗೆ ಮಾಹಿತಿ ನೀಡಿದ್ದಾರೆ.
ಐಪಿಎಲ್ ಟೂರ್ನಿಯನ್ನು ಎಲ್ಲಿ ನಡೆಸಬೇಕೆಂಬ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು, ಆಟಗಾರರ ಸುರಕ್ಷತೆ ಎಲ್ಲಕ್ಕಿಂತ ಮಿಗಿಲಾದದ್ದು, ಅದರೊಂದಿಗೆ ರಾಜಿ ಇಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಐಪಿಎಲ್ ನ್ನು ವಿದೇಶಗಳಲ್ಲಿ ನಡೆಸಲಾಗಿದೆ 2009 ರಲ್ಲಿ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. 2014 ರಲ್ಲಿಯೂ ಇದೇ ಕಾರಣದಿಂದ ಭಾಗಶಃ ಟೂರ್ನಿಯನ್ನು ಯುಎಇಯಲ್ಲಿ ನಡೆಸಲಾಗಿತ್ತು. ಆದರೆ 2019 ರಲ್ಲಿ ಬಿಸಿಸಿಐ ಚುನಾವಣೆಯ ಜೊತೆಗೇ ಐಪಿಎಲ್ ನ್ನು ನಡೆಸಿತ್ತು.
ಈಗ ಟೂರ್ನಿ ನಡೆಸಲು ಆಯ್ಕೆ ಮಾಡಿಕೊಳ್ಳಬಹುದಾಗಿರುವ ಪ್ರದೇಶಗಳಲ್ಲಿ ಯುಎಇ ಮುಂಚೂಣಿಯಲ್ಲಿದೆ. ಶ್ರೀಲಂಕಾ ಖರ್ಚು ವೆಚ್ಚಗಳ ದೃಷ್ಟಿಯಿಂದ ಆದ್ಯತೆಯ ಪ್ರದೇಶವಾಗಿದೆ. ನ್ಯೂಜಿಲ್ಯಾಂಡ್ ನಲ್ಲಿ ಕೋವಿಡ್-19 ಪ್ರಮಾಣ ಕಡಿಮೆ ಇದ್ದು, ಸಾಧ್ಯತೆಗಳ ಅಂಶ ಅಡ್ಡಿಯಾಗಿದೆ. ಭಾರತಕ್ಕೂ ನ್ಯೂಜಿಲ್ಯಾಂಡ್ ಗೂ 7 ಗಂಟೆಗಳ ಸಮಯದ ವ್ಯತ್ಯಾಸವಿದ್ದು, ಅಲ್ಲಿ ಮಧ್ಯಾಹ್ನ 12:30 ಕ್ಕೆ ಪಂದ್ಯ ಪ್ರಾರಂಭವಾದರೂ ಸಹ ಭಾರತದಲ್ಲಿ ಅತಿ ಹೆಚ್ಚು ಜನರು ಆ ಸಮಯದಲ್ಲಿ ಕೆಲಸದಲ್ಲಿ ನಿರತರಾಗಿರುತ್ತಾರೆ ಆದ್ದರಿಂದ ವೀಕ್ಷಕರ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಇನ್ನು ಹ್ಯಾಮಿಲ್ಟನ್ ಹಾಗೂ ಆಕ್ಲೆಂಡ್ ಗಳನ್ನು ರಸ್ತೆ ಮಾರ್ಗವಾಗಿ ತಲುಪಬಹುದಾಗಿದ್ದು, ವೆಲ್ಲಿಂಗ್ಟನ್, ಕ್ರೈಸ್ಟ್‌ಚರ್ಚ್, ನೇಪಿಯರ್ ಅಥವಾ ಡುನೆಡಿನ್ ಗಳಿಗೆ ವಿಮಾನದ ಮೂಲಕವೇ ತಲುಪಬೇಕಾಗುತ್ತದೆ. ಐಪಿಎಲ್ ನಡೆಸುವ ಸಂಬಂಧ ಗೌರ್ನಿಂಗ್ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಇನ್ನು ಇತ್ತೀಚೆಗೆ ಚೀನಾ-ಭಾರತದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಭಾರತದಲ್ಲಿ ಚೀನಾ ವಿರೋಧಿ ಭಾವನೆ ಬಲವಾಗಿ ಬೇರೂರಿದೆ. ಆದ ಕಾರಣ ಐಪಿಎಲ್ ಪ್ರಾಯೋಜಕತ್ವಕ್ಕೆ ಚೀನಾ ಮೂಲದ ಕಂಪನಿಗಳು ಹಾಗೂ ಚೀನಾ ಹೂಡಿಕೆ ಹೊಂದಿರುವ ಭಾರತದ ಕಂಪನಿಗಳನ್ನೂ ದೂರವಿಡುವುದರ ಬಗ್ಗೆ ಜಿಸಿ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.
Advertisement