'ಪಿಎಂ-ಕೇರ್ಸ್'ಗೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮ ನೆರವು
ನವದೆಹಲಿ: ಜಾಗತಿಕ ಪಿಡುಗಾಗಿರುವ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೆರೆದಿರುವ ಪಿಎಂ-ಕೇರ್ಸ್ ಮತ್ತು ಮುಖ್ಯಮಂತ್ರಿ (ಮಹಾರಾಷ್ಟ್ರ) ಪರಿಹಾರ ನಿಧಿಗೆ ನೆರವು ನೀಡುವುದಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮ ಸೋಮವಾರ ಹೇಳಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಬರೆದಿರುವ ಕೊಹ್ಲಿ, ''ಅನುಷ್ಕಾ ಮತ್ತು ನಾನು ಪಿಎಂ-ಕೇರ್ಸ್ ನಿಧಿ ಮತ್ತು ಮುಖ್ಯಮಂತ್ರಿ (ಮಹಾರಾಷ್ಟ್ರ) ಪರಿಹಾರ ನಿಧಿಗೆ ತಮ್ಮ ಬೆಂಬಲವಿದೆ. ನಮ್ಮ ಎರಡು ಹೃದಯಗಳು ಸಂಕಷ್ಟದಲ್ಲಿರುವವರನ್ನು ನೋಡುತ್ತಿವೆ. ನಮ್ಮ ನೆರವು ನಮ್ಮ ಸಹವರ್ತಿಗಳ ನೋವನ್ನು ಸ್ವಲ್ಪ ತಗ್ಗಿಸಬಹುದೆಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ,'' ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಎಷ್ಟು ಮೊತ್ತದ ಹಣವನ್ನು ದೇಣಿಗೆ ನೀಡುತ್ತಿದ್ದೇವೆ ಎಂದು ಬಹಿರಂಗಪಡಿಸಿಲ್ಲ.
ಇದಕ್ಕೂ ಮುನ್ನ ಬಿಸಿಸಿಐ ಪಿಎಂ-ಕೇರ್ಸ್ ನಿಧಿಗೆ 51 ಕೋಟಿ ರೂಪಾಯಿ ನೀಡಿದರೆ, ಸುರೇಶ್ ರೈನಾ 31 ಲಕ್ಷ ರೂ.ಗಳನ್ನು ಪಿಎಂ-ಕೇರ್ಸ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ನಿಧಿಗೆ 21 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಕೋವಿಡ್-19 ವಿರುದ್ಧದ ಹೋರಾಟಕ್ಕೆ ರಚಿಸಲಾಗಿರುವ ಪಿಎಂ-ಕೇರ್ಸ್ ನಿಧಿಗೆ ದೇಶದ ನಾಗರಿಕರು ನೆರವು ನೀಡಬಹುದು ಎಂದು ಪ್ರಧಾನಿ ಕಳೆದ ಶನಿವಾರ ಘೋಷಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ