ಎರಡನೇ ಟಿ-20 ಪಂದ್ಯ: ಲಂಕಾ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಬೀಗಿದ ಭಾರತ

ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ ಎರಡನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಏಳು ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆಯಿತು.
ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾ ಆಟಗಾರರು

ಇಂದೋರ್: ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ ಎರಡನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಏಳು ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆಯಿತು.

ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ, ಟೀಮ್ ಇಂಡಿಯಾ ಗೆಲುವಿಗೆ 143 ರನ್ ಗುರಿ ನೀಡಿತು.

ಶ್ರೀಲಂಕಾ ನೀಡಿದ 143 ರನ್ ಗುರಿ ಹಿಂಬಾಲಿಸಿದ ಭಾರತ ತಂಡಕ್ಕೆ ಶಿಖರ್ ಧವನ್ ಹಾಗೂ ಕೆ.ಎಲ್ ರಾಹುಲ್ ಜೋಡಿ ಮೊದಲನೇ ವಿಕೆಟ್‌ಗೆ 71 ರನ್ ಗಳಿಸಿ ಭರ್ಜರಿ ಆರಂಭ ನೀಡಿತು.

ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಶಿಖರ್ ಧವನ್ ಸಮಯೋಜಿತ ಬ್ಯಾಟಿಂಗ್ ಮಾಡಿದರು. 29 ಎಸೆತಗಳಲ್ಲಿ 32 ರನ್ ಗಳಿಸಿದರು. ಅದ್ಭುತ ಲಯದಲ್ಲಿದ್ದ ಕೆ.ಎಲ್ ರಾಹುಲ್ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದರು. 32 ಎಸೆತಗಳನ್ನು ಎದುರಿಸಿದ ಅವರು ಆರು ಬೌಂಡರಿಯೊಂದಿಗೆ 45 ರನ್ ಸಿಡಿಸಿದರು.

ಉತ್ತಮ ಬ್ಯಾಟಿಂಗ್ ಮುಂದುವರಿಸಿದ್ದ ರಾಹುಲ್ ಅವರನ್ನು ವನಿಂದು ಹಸರಂಗ ಕ್ಲೀನ್ ಬೌಲ್ಡ್‌ ಮಾಡಿದರು. ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಶ್ರೇಯಸ್ ಅಯ್ಯರ್ ಅವರು 26 ಎಸೆತಗಳಲ್ಲಿ 34 ರನ್ ಗಳಿಸಿದರು. ಕೊನೆಯವರೆಗೂ ಬ್ಯಾಟಿಂಗ್ ಮಾಡಿದ ನಾಯಕ ವಿರಾಟ್ ಕೊಹ್ಲಿ ಕೇವಲ 17 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ 30 ರನ್ ಗಳಿಸಿ ತಂಡವನ್ನು ಇನ್ನೂ 15 ಎಸೆತ ಬಾಕಿ ಇರುವಾಗಲೇ ಗೆಲುವಿನ ದಡ ಸೇರಿಸಿದರು.

ಒಟ್ಟಾರೆ, ಭಾರತ 17.3 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಜಯದ ನಗೆ ಬೀರಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com