ಒಬ್ಬರ ಪ್ಯಾಂಟ್‌ ಕಳಚಲು ಕೇವಲ 2 ಸೆಕೆಂಡ್ಸ್‌ ಸಾಕು: ಪಾಕ್ ಮಾಜಿ ಕ್ರಿಕೆಟಿಗರಿಗೆ ರಮೀಝ್ ರಾಜಾ ಎಚ್ಚರಿಕೆ!

ಕಳೆದ ಕೆಲ ತಿಂಗಳುಗಳಲ್ಲಿ ಪಾಕಿಸ್ತಾನದ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಡಿಜಿಟಲ್‌ ಮಾಧ್ಯಮ ಯೂಟ್ಯೂಬ್‌ನಲ್ಲಿ ತಮ್ಮದೇ ಚಾನಲ್‌ಗಳನ್ನು ಆರಂಭಿಸಿ ಅಭಿಮಾನಿಗಳೊಟ್ಟಿಗೆ ವಿಶೇಷ ಸಂಗತಿಗಳನ್ನು ಹಂಚಿಕೊಳ್ಳುವುದರಲ್ಲಿ ತೊಡಗಿಸಿಕೊಂಡಿದ್ದಾರೆ.
ರಮೀಝ್ ರಾಜಾ
ರಮೀಝ್ ರಾಜಾ

ನವದೆಹಲಿ: ಕಳೆದ ಕೆಲ ತಿಂಗಳುಗಳಲ್ಲಿ ಪಾಕಿಸ್ತಾನದ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಡಿಜಿಟಲ್‌ ಮಾಧ್ಯಮ ಯೂಟ್ಯೂಬ್‌ನಲ್ಲಿ ತಮ್ಮದೇ ಚಾನಲ್‌ಗಳನ್ನು ಆರಂಭಿಸಿ ಅಭಿಮಾನಿಗಳೊಟ್ಟಿಗೆ ವಿಶೇಷ ಸಂಗತಿಗಳನ್ನು ಹಂಚಿಕೊಳ್ಳುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ, ಕೆಲ ಆಟಗಾರರು ಈ ವೇದಿಕೆ ಮೂಲಕ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಮತ್ತು ಕೆಲ ಮಾಜಿ ಆಟಗಾರರ ವಿರುದ್ಧ ಆರೋಪಗಳನ್ನು ಮಾಡಿಕೊಳ್ಳುವುದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ಇದರ ವಿರುದ್ಧ ಪಾಕ್‌ ತಂಡದ ಮಾಜಿ ನಾಯಕ ರಮೀಝ್‌ ರಾಜಾ ಅಸಮಾಧಾನ ಹೊರಹಾಕಿದ್ದಾರೆ.

ಕ್ರಿಕೆಟ್‌ ವೃತ್ತಿಬದುಕಿನ ಬಳಿಕ ಯಶಸ್ವಿ ಕಾಮೆಂಟೇಟರ್‌ ಆಗಿ ಬೆಳೆದ ರಮೀಝ್, ತಮ್ಮ ಸ್ವದೇಶಿ ಮಿತ್ರ ಕ್ರಿಕೆಟಿಗರಿಗೆ ಡಿಜಿಟಲ್‌ ಮಾಧ್ಯಮಗಳಲ್ಲಿ ಕೊಂಚ ಪ್ರಜ್ಞಾವಂತರ ರೀತಿಯಲ್ಲಿ ವರ್ತಿಸುವಂತೆ ಬುದ್ಧಿಮಾತುಗಳನ್ನು ಹೇಳಿದ್ದಾರೆ. "ಇಂತಹ ವೇದಿಕೆಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಜಾಗರೂಕರಾಗಿರಿ ಇದರಿಂದ ಪಾಕಿಸ್ತಾನದ ಕ್ರಿಕೆಟ್‌ಗೆ ಮಸಿ ಅಂಟಿಕೊಳ್ಳುತ್ತಿದೆ ಎಂದು ಎಚ್ಚರಿಸಿದ್ದಾರೆ.

ಮೈಕ್‌ ಅತ್ಯಂತ ಶಕ್ತಿಶಾಲಿ ಮಾಧ್ಯಮ. ಇಲ್ಲಿ ಒಬ್ಬರ ಪ್ಯಾಂಟ್‌ ಕಳಚಲು ಕೇವಲ ಎರಡು ಸೆಕೆಂಡ್‌ಗಳು ಸಾಕು. ಹೀಗಾಗಿ ಬಹಳ ಎಚ್ಚರದಿಂದ ಇರಿ. ಜವಾಬ್ದಾರಿಯುತವಾಗಿ ವರ್ತಿಸಿ. ಅರಗಿಸಿಕೊಳ್ಳುವಂತಹ ವಿಚಾರಗಳನ್ನು ಮಾತ್ರ ಮಾತನಾಡಬೇಕು. ನಾನು ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ ಒಂದಿಬ್ಬರು ಕ್ರಿಕೆಟಿಗರ ವಿರುದ್ಧ ಪಿಸಿಬಿ ಸೈಬರ್‌ ಕ್ರೈಮ್ ವಿಭಾಗಕ್ಕೆ ದೂರು ನೀಡಿದೆ. ಉದ್ವೇಗದಲ್ಲಿ ಕೆಲ ಆಟಗಾರರು ಎಲ್ಲೆ ಮೀರಿ ಮಾತನಾಡಿದ್ದಾರೆ. ಬದಲಾವಣೆ ಬಯಸಿದರೆ ಅದನ್ನು ತರಲು ಬೇರೆ ಮಾರ್ಗಗಳು ಇವೆ ಎಂದು ರಮೀಝ್‌ ತಮ್ಮ ಯೂಟ್ಯೂಬ್‌ ಚಾನಲ್‌ ಮೂಲಕ ತಿಳಿಹೇಳಿದ್ದಾರೆ.

ಕೆಲ ಮಾಜಿ ಕ್ರಿಕೆಟಿಗರು ಯೂಟ್ಯೂಬ್‌ ಚಾನಲ್‌ಗಳನ್ನು ಆರಂಭಿಸಿದ್ದಾರೆ. ಇಲ್ಲಿ ವೈಯಕ್ತಿ ವಿಚಾರಗಳನ್ನು ತಂದು ಒಬ್ಬರನ್ನು ಗುರಿಯಾಗಿಸಿ ಮಾತನಾಡುವ ಕೆಲಸ ನಡೆಯುವುದು ಬೇಡ. ಇದರಿಂದ ಆರೋಪಕ್ಕೆ ಒಳಗಾದವರೂ ಕೂಡ ಕೆಲ ಕಠಿಣ ಹೆಜ್ಜೆಗಳನ್ನು ಇಡುವಂತಾಗುತ್ತದೆ. ವ್ಯವಸ್ಥೆಯಲ್ಲಿ ಸಮಸ್ಯೆ ಇದ್ದರೆ, ಅದನ್ನು ಬದಲಾಯಿಸಲು ಬೇರೆ ಮಾರ್ಗಗಳು ಇವೆ. ಇದನ್ನು ಸರಿಯಾದ ರೀತಿಯಲ್ಲಿ ಮಾಡೋಣ ಎಂದು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com