ನವದೆಹಲಿ: ನಿಧಾನಗತಿಯ 'ಅನುಪಯುಕ್ತ' ಪಿಚ್ ಗಳಿಂದ ಕಡಿಮೆ ಸ್ಕೋರ್ ದಾಖಲಾಗುತ್ತಿದೆ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಬೆನ್ ಸ್ಟೋಕ್ಸ್ ಐಪಿಎಲ್ ಕುರಿತು ಅಸಮಾಧಾನ ಹೊರಹಾಕಿದ್ದಾರೆ.
ಹೌದು..ಕೈ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ಬಿದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಬೆನ್ ಸ್ಟೋಕ್ಸ್ ಐಪಿಎಲ್ ಕುರಿತು ಅಸಮಾಧಾನ ಹೊರಹಾಕಿದ್ದು, 'ಐಪಿಎಲ್ ಪಂದ್ಯಗಳೆಂದರೆ ತಂಡವೊಂದು ಕನಿಷ್ಠ 160 ರಿಂದ 170 ರನ್ ಗಳಿಸಬೇಕೇ ಹೊರತು 130-140 ರನ್‌ಗಳಿಗೆ ಬಹುತೇಕ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಅಂತ್ಯಗೊಳಿಸುವ ರೀತಿ ಇರಬಾರದು ಎಂದು ಟ್ವೀಟ್ ಮಾಡಿದ್ದಾರೆ.
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಶಸ್ವಿಯಾಗಿ ನಡೆಯುತ್ತಿದ್ದು ಈಗಾಗಲೇ ಲೀಗ್ ಹಂತದ 17 ಪಂದ್ಯಗಳು ಮುಗಿದಿವೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರಂಭದ ಪಂದ್ಯಗಳು ಮುಂಬೈ ಮತ್ತು ಚೆನ್ನೈನಲ್ಲಿ ನಡೆಯುತ್ತಿದ್ದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯಗಳಲ್ಲಿ ರನ್‌ಗಳು ಹೆಚ್ಚಾಗಿಯೇ ಬರುತ್ತಿವೆ, ಆದರೆ ಚೆನ್ನೈನ ಸ್ಟೇಡಿಯಂನಲ್ಲಿ ಮಾತ್ರ 150ರ ಗಡಿ ದಾಟುವುದು ಕೂಡ ಕಷ್ಟವಾಗಿದೆ. ಚೆನ್ನೈ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ ಮತ್ತು ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಳ್ಳುತ್ತಿದ್ದಾರೆ. ಬೆನ್ ಸ್ಟೋಕ್ಸ್ ಅವರು ಪಿಚ್ ಕುರಿತು ಮಾಡಿರುವ ಟ್ವೀಟ್ ಚೆನ್ನೈ ಪಿಚ್‌ನ್ನು ಪರೋಕ್ಷವಾಗಿ ಟೀಕಿಸುವುದರ ಮೂಲಕ ಐಪಿಎಲ್ ಪಿಚ್‌ಗಳ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಶುಕ್ರವಾರದವರೆಗೆ, ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಒಂಬತ್ತು ಪಂದ್ಯಗಳನ್ನು ಆಯೋಜಿಸಿದೆ ಮತ್ತು ಕೇವಲ ಎರಡು ಬಾರಿ ಮಾತ್ರ 170 ಕ್ಕಿಂತ ಹೆಚ್ಚು ರನ್ ದಾಖಲಾಗಿದೆ. ಒಮ್ಮೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 204 ರನ್ ಗಳಿಸಿತು ಮತ್ತು ಇನ್ನೊಂದು ಬಾರಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ 187 ರನ್ ಗಳಿಸಿತ್ತು.
Advertisement