ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಪ್ರವಾಸಕ್ಕೆ ತೆರಳಿದ್ದ ಟೀಂ ಇಂಡಿಯಾ ಆಟಗಾರರಾದ ಯಜುವೇಂದ್ರ ಚಹಲ್, ಕೆ ಗೌತಮ್ ಅವರೂ ಕೂಡ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಸೋಂಕಿಗೆ ತುತ್ತಾಗಿ ಐಸೋಲೇಷನ್ ನಲ್ಲಿರುವ ಕೃಣಾಲ್ ಪಾಂಡ್ಯ ಅವರ ಸಂಪರ್ಕಕ್ಕೆ ಬಂದಿದ್ದ ಮಂದಿ ಆಟಗಾರರಲ್ಲಿ ಭಾರತ ತಂಡದ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ಕೆ ಗೌತಮ್ ಕೂಡ ಇದ್ದರು. ಇದೀಗ ಈ ಇಬ್ಬರೂ ಆಟಗಾರರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಂಡದ ಮೂಲಗಳು ತಿಳಿಸಿವೆ.
ಕೃಣಾಲ್ ಪಾಂಡ್ಯ ಸಂಪರ್ಕಕ್ಕೆ ಬಂದಿದ್ದ 8 ಮಂದಿ ಆಟಗಾರರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ ಕೃಣಾಲ್ ಪಾಂಡ್ಯಾ ಸಹೋದರ ಹಾರ್ದಿಕ್ ಪಾಂಡ್ಯ, ಮನೀಷ್ ಪಾಂಡೆ, ದೀಪಕ್ ಚಹರ್, ಇಶಾನ್ ಕಿಶನ್ ಅವರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಹೀಗಾಗಿ ಅವರು ಭಾರತಕ್ಕೆ ಹಿಂದಿರುಗಲಿದ್ದಾರೆ. ಆದರೆ ಪೃಥ್ವಿ ಶಾ ಮತ್ತು ಸೂರ್ಯ ಕುಮಾರ್ ಯಾದವ್ ಶ್ರೀಲಂಕಾದಿಂದ ನೇರವಾಗಿ ಇಂಗ್ಲೆಂಡ್ ಹಾರಲಿದ್ದು, ಅಲ್ಲಿ ಕೊಹ್ಲಿ ಪಡೆಯನ್ನು ಸೇರಲಿದ್ದಾರೆ. ಇದಕ್ಕೂ ಮೊದಲು ಇಬ್ಬರೂ ಆಟಗಾರರು ಐಸೊಲೇಷನ್ ಪೂರೈಸಬೇಕಿದೆ.
ಆದರೆ ಈಗ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ಯಜುವೇಂದ್ರ ಚಹಲ್, ಮತ್ತು ಕೆ ಗೌತಮ್ ಕೊಲಂಬೋದಲ್ಲಿರುವ ಕೋವಿಡ್ ಕೇಂದ್ರದಲ್ಲಿ ಕೃಣಾಲ್ ಪಾಂಡ್ಯ ಅವರೊಂದಿಗೆ ಐಸೊಲೇಷನ್ ನಲ್ಲಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement