ಕೋವಿಡ್-19ಗೆ ತಾಯಿ, ಸಹೋದರಿ ಬಲಿಯಾದಾಗ ಸಂಪೂರ್ಣ ಕುಸಿದು ಹೋಗಿದ್ದೆ: ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ

ಇತ್ತೀಚೆಗೆ ಕೋವಿಡ್-19ನಿಂದಾಗಿ ನನ್ನ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡಾಗ ಸಂಪೂರ್ಣವಾಗಿ ಕುಸಿದು ಹೋಗಿದ್ದೆ ಎಂದು ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಹೇಳಿದ್ದಾರೆ.
ಸಹೋದರಿಯೊಂದಿಗೆ ವೇದಾ ಕೃಷ್ಣಮೂರ್ತಿ (ಕ್ರಿಕ್ ಇನ್ಫೋ ಚಿತ್ರ)
ಸಹೋದರಿಯೊಂದಿಗೆ ವೇದಾ ಕೃಷ್ಣಮೂರ್ತಿ (ಕ್ರಿಕ್ ಇನ್ಫೋ ಚಿತ್ರ)

ಮುಂಬೈ: ಇತ್ತೀಚೆಗೆ ಕೋವಿಡ್-19ನಿಂದಾಗಿ ನನ್ನ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡಾಗ ಸಂಪೂರ್ಣವಾಗಿ ಕುಸಿದು ಹೋಗಿದ್ದೆ ಎಂದು ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ಇಎಸ್‌ಪಿಎನ್‌ ಕ್ರಿಕ್ ಇನ್ಫೋ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ಸಾಂಕ್ರಾಮಿಕ ಸಂದರ್ಭದ್ಲಿ ತಾವು ಎದುರಿಸಿದ ಕಠಿಣ ಪರಿಸ್ಥಿತಿಗಳ  ಮೆಲುಕು ಹಾಕಿದ್ದಾರೆ.

ವೇದಾ ಕೃಷ್ಣಮೂರ್ತಿಯ ಕುಟುಂಬದ ಒಂಬತ್ತು ಮಂದಿ ಕೊರೊನಾಗೆ ತುತ್ತಾಗಿ ತತ್ತರಿಸಿದ್ದರು. ಕೇವಲ ಎರಡು ವಾರಗಳ ಅಂತರದಲ್ಲಿ ವೇದಾ ಅವರ ತಾಯಿ ಮತ್ತು ಸಹೋದರಿ ಕಳೆದ ತಿಂಗಳು ಕಡೂರಿನಲ್ಲಿ ಮೃತಪಟ್ಟಿದ್ದರು. ಕೇವಲ 2 ವಾರಗಳ ಅಂತರದಲ್ಲಿ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ಬಗ್ಗೆ  ಭಾವುಕರಾಗಿ ಮಾತನಾಡಿದ ವೇದಾ ಕೃಷ್ಣಮೂರ್ತಿ, 'ಹಣೆಬರಹದ ಬಗ್ಗೆ ನಾನು ತುಂಬಾ ನಂಬಿಕೆ ಇಟ್ಟವಳಾಗಿದ್ದೇನೆ. ನನ್ನ ತಂಗಿ ಗುಣಮುಖಳಾಗಿ ಮನೆಗೆ ಹಿಂದಿರುಗಬಹುದೆಂದು ನಾನು ನಿಜವಾಗಿಯೂ ಆಶಿಸಿದ್ದೆ. ಅವಳು ವಾಪಸ್ ಬರದಿದ್ದಾಗ, ನಾನು ಸಂಪೂರ್ಣವಾಗಿ ಕುಸಿದುಹೋಗಿದ್ದೆ. ಈಗ ನಿಧಾನವಾಗಿ ಆ  ದುಃಖದಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಂತೆಯೇ ನನ್ನ ಕುಟುಂಬದ ಉಳಿದವರಿಗಾಗಿ ನಾನು ಧೈರ್ಯಶಾಲಿಯಾಗಿರಬೇಕಿತ್ತು. ನನ್ನ ಕುಟುಂಬದ ಪೈಕಿ ನಾನೊಬ್ಬಳು ಮಾತ್ರ ಕೊರೊನಾ ಸೋಂಕಿಗೆ ತುತ್ತಾಗಿಲ್ಲ. ಆ ಪರೀಕ್ಷೆಯ ಒಂದೆರಡು ವಾರಗಳಲ್ಲಿ ನಾನು ನನ್ನ ದುಃಖದಿಂದ ಹೊರಬರಲು ಕಲಿತೆ. ಆದರೆ, ಅಷ್ಟು ಸುಲಭವಾಗಿ ಅದು ನಿಮ್ಮನ್ನು  ಬಿಡುವುದಿಲ್ಲ ಮತ್ತೆ ಮತ್ತೆ ಕಾಡುತ್ತದೆ. ಸಂಕಷ್ಟದ ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ವೇದಾ ಕೃಷ್ಣಮೂರ್ತಿ ಹೇಳಿಕೊಂಡಿದ್ದಾರೆ.

'ನನ್ನ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯ ಒದಗಿಸಿದೆ. ಈ ಸಂದರ್ಭ, ಸಾಮಾನ್ಯ ಜನರಿಗೆ ಮೂಲಭೂತ ಆರೋಗ್ಯದ ಸೌಲಭ್ಯ ಪಡೆದುಕೊಳ್ಳಲು ಎಷ್ಟು ಕಷ್ಟವಾಗಬಹುದೆಂದು ಅರಿತುಕೊಂಡೆ. ಕೋವಿಡ್ ಸೋಂಕಿತರಾದಾಗ ಏನು ಮಾಡಬೇಕು ಎಂಬುದರ ಕುರಿತು ವೈದ್ಯರ ಸಲಹೆ ಪಡೆಯುವುದೂ ಸಹ ಬಹಳಷ್ಟು  ಜನರಿಗೆ ಕಷ್ಟವಾಗಿತ್ತು ಎಂಬುದನ್ನು ಆ ಸಮಯದಲ್ಲಿ ಟ್ವಿಟರ್ ಮೂಲಕ ತಿಳಿದುಕೊಂಡೆ. ಸೋಂಕಿಗೆ ತುತ್ತಾಗಿದ್ದ ತಾಯಿ ಮತ್ತು ಸಹೋದರಿ ಕೂಡ ಆತಂಕದಿಂದ ಬಳಲುತ್ತಿದ್ದರು. ಕೋವಿಡ್ ಎದುರಿಸಲು ಮಾನಸಿಕ ಶಕ್ತಿ ತುಂಬಾ ಮುಖ್ಯ. ನನ್ನ ಹಿರಿಯ ಸಹೋದರಿ ವತ್ಸಲಾ ಅವರು ಕೋವಿಡ್‌ನಿಂದ ಸಾವಿಗೀಡಾಗುವ  ಮೊದಲು ತುಂಬಾ ಆತಂಕದಕ್ಕಿದ್ದರು. ನನ್ನ ತಾಯಿ ಕೂಡ ಭಯಭೀತರಾಗಿದ್ದರು. ನನ್ನ ಕುಟುಂಬಸ್ಥರಿಗೆಲ್ಲ ಕೋವಿಡ್ ಸೋಂಕು ತಗುಲಿದ್ದು, ಅವರ ಆತಂಕವನ್ನು ಇಮ್ಮಡಿಗೊಳಿಸಿತ್ತು ಎಂದೆನಿಸುತ್ತದೆ. ಅಲ್ಲದೆ ಅವರು ಬೆಂಗಳೂರಿನಿಂದ 230 ಕಿ.ಮೀ ದೂರದ ಕಡೂರಿನಲ್ಲಿದ್ದರು ಎಂದು ವೇದಾ ಕೃಷ್ಣಮೂರ್ತಿ  ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ವೇದಾ ಕೃಷ್ಣಮೂರ್ತಿ ಅವರ ಸಹೋದರಿ ವತ್ಸಲಾ ಕೃಷ್ಣಮೂರ್ತಿ(40) ಕೋವಿಡ್ ವಿರುದ್ದ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಾರೆ. ಕೇವಲ 10 ದಿನಗಳ   ಹಿಂದಷ್ಟೇ ವೇದಾ ಕೃಷ್ಣಮೂರ್ತಿ ತಾಯಿ ಚಲುವಾಂಬ(63) ಕೊರೋನಾದಿಂದಾಗಿ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಕೊನೆಯುಸಿರೆಳೆದಿದ್ದರು. ನ್ಯೂಮೊನಿಯಾದಿಂದ ಬಳಲುತ್ತಿದ್ದ ವತ್ಸಲಾ ಸಹ ಇದೀಗ ಕೋವಿಡ್‌ಗೆ ಬಲಿಯಾಗಿದ್ದಾರೆ. ಕಡೂರು ಪಟ್ಟಣದ ನಿವಾಸಿಯಾಗಿದ್ದ ವತ್ಸಲಾ ಕೃಷ್ಣಮೂರ್ತಿ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com