23 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ಹರ್ಭಜನ್ ಸಿಂಗ್ ವಿದಾಯ!

ಟೀಂ ಇಂಡಿಯಾದ ದಿಗ್ಗಜ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 
ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್

ನವದೆಹಲಿ: ಟೀಂ ಇಂಡಿಯಾದ ದಿಗ್ಗಜ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 

1998ರಲ್ಲಿ ಕೇವಲ 17ನೇ ವಯಸ್ಸಿನಲ್ಲಿ ಕ್ರಿಕೆಟ್ ವೃತ್ತಿಗೆ ಹರ್ಭಜನ್ ಸಿಂಗ್ ಪಾದಾರ್ಪಣೆ ಮಾಡಿದ್ದರು. ಈಗ 23 ವರ್ಷಗಳ ನಂತರ ಅವರು ಕ್ರಿಕೆಟ್‌ಗೆ ಶಾಶ್ವತವಾಗಿ ವಿದಾಯ ಹೇಳಿದ್ದಾರೆ.

ಹರ್ಭಜನ್ ಸಿಂಗ್ 1998ರಲ್ಲಿ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಇದರ ನಂತರ ಅವರು ಅದೇ ವರ್ಷದಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಏಕದಿನ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅವರು 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ T20ಗೆ ಪಾದಾರ್ಪಣೆ ಮಾಡಿದ್ದರು.

ಹರ್ಭಜನ್ ಸಿಂಗ್ ಅವರ ವೃತ್ತಿಜೀವನ
ಅಂದಿನಿಂದ, 2015ರವರೆಗೆ, ಅವರು 103 ಟೆಸ್ಟ್ ಪಂದ್ಯಗಳಲ್ಲಿ 417 ವಿಕೆಟ್ಗಳನ್ನು ಪಡೆದಿದ್ದಾರೆ. ಎರಡು ಶತಕಗಳೊಂದಿಗೆ 2235 ರನ್ಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ 236 ಏಕದಿನ ಪಂದ್ಯಗಳಲ್ಲಿ 269 ವಿಕೆಟ್ಗಳನ್ನು ಮತ್ತು 1237 ರನ್ಗಳನ್ನು ಗಳಿಸಿದರು. ಇನ್ನು ಟಿ20ಯಲ್ಲಿ 28 ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಪಡೆದಿದ್ದಾರೆ. ಅನಿಲ್ ಕುಂಬ್ಳೆ ಮತ್ತು ಆರ್ ಅಶ್ವಿನ್ ನಂತರ ಹರ್ಭಜನ್ ಸಿಂಗ್ ಭಾರತ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ. ಹರ್ಭಜನ್ ಸಿಂಗ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ. ಇದರಲ್ಲಿ ಒಟ್ಟು 150 ವಿಕೆಟ್‌ಗಳನ್ನು ಪಡೆದಿದ್ದಾರೆ.

ರಾಜಕೀಯ ಪ್ರವೇಶ ಸಾಧ್ಯತೆ
ಇತ್ತೀಚೆಗೆ ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹರ್ಭಜನ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಅಂದಿನಿಂದ ಹರ್ಭಜನ್ ಸಿಂಗ್ ಶೀಘ್ರದಲ್ಲೇ ರಾಜಕೀಯ ಸೇರಬಹುದು ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಅನುಭವಿ ಆಟಗಾರ ಇದನ್ನು ಕೇವಲ ವದಂತಿ ಎಂದು ಬಣ್ಣಿಸಿದ್ದರು ಮತ್ತು ನವಜೋತ್ ಸಿಂಗ್ ಸಿಧು ಅವರನ್ನು ಕ್ರಿಕೆಟಿಗನಾಗಿ ಭೇಟಿಯಾಗಿರುವುದಾಗಿ ಹೇಳಿದ್ದರು. ಅದೇ ಸಮಯದಲ್ಲಿ, ಪಂಜಾಬ್‌ನ ಈ ಸ್ಟಾರ್ ನಿವೃತ್ತಿಯ ನಂತರ ಐಪಿಎಲ್ ತಂಡದ ಸಹಾಯಕ ಸಿಬ್ಬಂದಿಯಾಗಿ ಸೇರಿಕೊಳ್ಳಬಹುದು ಎಂದು ಕೆಲವು ಸಮಯದ ಹಿಂದೆ ವರದಿಯಾಗಿದೆ. ಅದರೆ ಅದು ಇನ್ನು ದೃಢಪಟ್ಟಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com