'ನನ್ನ ವೃತ್ತಿಜೀವನದ 10-12 ವರ್ಷಗಳನ್ನು ಆತಂಕದಲ್ಲಿ ಕಳೆದಿದ್ದೆ': ಸಚಿನ್ ತೆಂಡೂಲ್ಕರ್

ತಮ್ಮ 24 ವರ್ಷಗಳ ವೃತ್ತಿಜೀವನದಲ್ಲಿ ಬಹುತೇಕ ವರ್ಷಗಳವರೆಗೆ ಆತಂಕದಿಂದ ಬಳಲುತ್ತಿದ್ದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಆಪ್ತ ವಿಚಾರವನ್ನು ಹೊರಹಾಕಿದ್ದಾರೆ.
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ನವದೆಹಲಿ: ತಮ್ಮ 24 ವರ್ಷಗಳ ವೃತ್ತಿಜೀವನದಲ್ಲಿ ಬಹುತೇಕ ವರ್ಷಗಳವರೆಗೆ ಆತಂಕದಿಂದ ಬಳಲುತ್ತಿದ್ದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಆಪ್ತ ವಿಚಾರವನ್ನು ಹೊರಹಾಕಿದ್ದಾರೆ.

ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಇದೇ ಮೊದಲ ಬಾರಿ ಮುಕ್ತವಾಗಿ ಮಾತನಾಡಿರುವ ಅವರು, ತಮ್ಮ ಮಾನಸಿಕ-ದೈಹಿಕ ಆರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ, ವಾಸ್ತವವನ್ನು ಒಪ್ಪಿಕೊಳ್ಳುವುದು ಅತ್ಯಂತ ಮುಖ್ಯವಾದದ್ದು ಜೀವನದಲ್ಲಿ ಎಂದು ಹೇಳಿದ್ದಾರೆ, ಈ ಕೋವಿಡ್-19 ಸಮಯದಲ್ಲಿ ಇವರ ಮಾತುಗಳು ಸುದ್ದಿಯಾಗುತ್ತಿದೆ.

ಕ್ರಿಕೆಟಿಗನಾಗಿ, ಕ್ರೀಡಾಪಟುವಾಗಿ ವರ್ಷಗಳು ಕಳೆಯುತ್ತಾ ಹೋದಂತೆ ಆಟಕ್ಕೆ ಶಾರೀರಿಕವಾಗಿ ದೃಢತೆ ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ಮಾನಸಿಕವಾಗಿಯೂ ಸಿದ್ದತೆ ನಡೆಸಬೇಕು. ಮೈದಾನಕ್ಕೆ ಇಳಿಯುವ ಸಾಕಷ್ಟು ಹೊತ್ತಿಗೆ ಮೊದಲೇ ಪಂದ್ಯ ಆರಂಭವಾಗಿದೆ ಎಂದೇ ನಾನು ಭಾವಿಸುತ್ತಿದ್ದೆ, ಆ ರೀತಿ ಸಿದ್ದವಾಗುತ್ತಿದ್ದೆ, ಆ ಸಮಯದಲ್ಲಿ ನನ್ನೊಳಗೆ ಆತಂಕ ತೀವ್ರವಾಗಿತ್ತು ಎಂದು ಯುನಾಕಡೆಮಿ ಆಯೋಜಿಸಿದ್ದ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.

ಈ ಆತಂಕ ನನ್ನ ವೃತ್ತಿಜೀವನದಲ್ಲಿ 10-12 ವರ್ಷಗಳ ಕಾಲ ಇತ್ತು. ಪಂದ್ಯಕ್ಕೆ ಮುನ್ನ ಹಲವು ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದೇನೆ.ವರ್ಷಗಳು ಉರುಳುತ್ತಾ ಹೋದಂತೆ ನನ್ನ ಪಂದ್ಯದ ತಯಾರಿಯ ಭಾಗವಿದು ಎಂದು ಅರಿವಾಗತೊಡಗಿತು. ನಂತರ ಸಮಯದೊಂದಿಗೆ ಹೊಂದಿಕೊಳ್ಳುತ್ತಾ ಹೋದೆ,ರಾತ್ರಿ ನಿದ್ದೆ ಬಾರದಿದ್ದಾಗ ನನ್ನ ಮನಸ್ಸಿನ ನೆಮ್ಮದಿಗಾಗಿ ಏನಾದರೊಂದು ಮಾಡುತ್ತಿದ್ದೆ.

ಶ್ಯಾಡೋ ಬ್ಯಾಟಿಂಗ್, ಟಿ ವಿ ನೋಡುವುದು, ವಿಡಿಯೊ ಗೇಮ್ ಆಡುವುದು ಇತ್ಯಾದಿಗಳನ್ನು ರಾತ್ರಿ ಹೊತ್ತು ಮಾಡಿ ಕಳೆದಿದ್ದೇನೆ. ಬೆಳಗ್ಗೆಯಾದ ಕೂಡಲೇ ಟೀ ಮಾಡಿ ಕುಡಿದು ಪಂದ್ಯಕ್ಕೆ ಸಿದ್ದವಾಗಿದ್ದು ಕೂಡ ಇದೆ ಎನ್ನುತ್ತಾರೆ ಸಚಿನ್ ತೆಂಡೂಲ್ಕರ್.

ಬೆಳಗ್ಗೆದ್ದು ಚಹಾ ಮಾಡಿ ಕುಡಿದು, ನನ್ನ ಬಟ್ಟೆಗಳನ್ನು ನಾನೇ ಇಸ್ತ್ರಿ ಮಾಡಿಕೊಂಡು ಪಂದ್ಯಕ್ಕೆ ಸಿದ್ದವಾಗುತ್ತಿದ್ದೆ. ನನ್ನ ಬ್ಯಾಗನ್ನು ನಾನೇ ಸಿದ್ದಮಾಡಿಕೊಳ್ಳುತ್ತಿದ್ದೆ, ಇದೆಲ್ಲಾ ನನಗೆ ನನ್ನ ಸೋದರ ಹೇಳಿಕೊಟ್ಟಿದ್ದು. ನಂತರ ಅದು ಅಭ್ಯಾಸವಾಗಿ ಹೋಯಿತು.ಈ ಅಭ್ಯಾಸವನ್ನು ಭಾರತದ ಪರವಾಗಿ ಆಡಿದ ಕೊನೆಯ ಮ್ಯಾಚ್ ವರೆಗೆ ಮುಂದುವರಿಸಿಕೊಂಡು ಹೋಗಿದ್ದೆ ಎನ್ನುತ್ತಾರೆ 48 ವರ್ಷದ 2013ರಲ್ಲಿ ಕ್ರಿಕೆಟ್ ವೃತ್ತಿಗೆ ನಿವೃತ್ತಿ ಹೇಳಿದ್ದರು.

ಕ್ರೀಡೆಯಲ್ಲಿ ಕ್ರೀಡಾಪಟು ಏರಿಳಿತ ಕಾಣುವುದು ಸಹಜ, ಆದರೆ ಸೋತಾಗ ಸಮಚಿತ್ತದಿಂದ ಸ್ವೀಕರಿಸಬೇಕು, ದೇಹಕ್ಕೆ ಗಾಯವಾದಾಗ ವೈದ್ಯರು ಪರೀಕ್ಷಿಸಿ ಹೇಗೆ ಔಷಧಿ ಕೊಡುತ್ತಾರೆಯೋ ಮನಸ್ಸಿಗೆ ಗಾಯವಾದಾಗಲೂ ಮತ್ತೊಬ್ಬರಿಂದ ಸಹಾಯ ಪಡೆದುಕೊಂಡು ಗುಣಪಡಿಸಲು ನೋಡಬೇಕು, ನೀವು ಸೋತಾಗ, ಮಾನಸಿಕವಾಗಿ ಕುಗ್ಗಿದಾಗ ನಿಮ್ಮ ಸುತ್ತ ಜನರಿರಬೇಕಷ್ಟೆ.
ಇಲ್ಲಿ ಬದುಕಿನ ಸತ್ಯಗಳನ್ನು ಸ್ವೀಕರಿಸುವುದು ಮುಖ್ಯವಾಗುತ್ತದೆ. ಅದು ಒಬ್ಬ ಕ್ರೀಡಾಪಟುವಿಗೆ ಮಾತ್ರವಲ್ಲ, ಆತನ ಸುತ್ತ ಇರುವ ಜನರಿಗೂ ಅನ್ವಯವಾಗುತ್ತದೆ. ನೀವು ವಾಸ್ತವವನ್ನು ಅರಿತಾಗ ಮುಂದಿನ ದಾರಿ ಹುಡುಕುತ್ತೀರಿ, ಜೀವನದಲ್ಲಿ ನಾವು ಯಾರಿಂದ ಬೇಕಾದರೂ ಕಲಿಯಬಹುದು, ನಾನು ಆಟವಾಡುತ್ತಿದ್ದ ದಿನದಲ್ಲಿ ಚೆನ್ನೈಯಲ್ಲಿ ಹೊಟೇಲ್ ಸಿಬ್ಬಂದಿಯಿಂದ ಕಲಿತೆ, ನಾನು ಉಳಿದುಕೊಂಡಿದ್ದ ಹೊಟೇಲ್ ನಲ್ಲಿ ಸಿಬ್ಬಂದಿ ಬಂದು ಟೇಬಲ್ ಮೇಲೆ ದೋಸೆ ಇಟ್ಟು ನನಗೊಂದು ಸಲಹೆ ಕೊಟ್ಟ, ನನ್ನ ಮೊಣಕೈ ಗಾಯದಿಂದ ಬ್ಯಾಟಿಂಗ್ ಸರಿಯಾಗಿ ಮಾಡಲಾಗುತ್ತಿಲ್ಲ ನಿಮಗೆ ಎಂದು ಹೇಳಿದ. ನನಗೆ ನನ್ನ ಸಮಸ್ಯೆ ಸರಿಯಾಗಿ ಗೊತ್ತಾಯಿತು ಎಂದು ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನವನ್ನು ನೆನೆದಿದ್ದಾರೆ.

ಕೋವಿಡ್-19 ಸಮಯದಲ್ಲಿ ಸತತವಾಗಿ ದುಡಿಯುತ್ತಿರುವ ಮುಂಚೂಣಿ ಕಾರ್ಯಕರ್ತರ ಶ್ರಮಕ್ಕೆ ಸಚಿನ್ ತೆಂಡೂಲ್ಕರ್ ಧನ್ಯವಾದ ಹೇಳಿದ್ದಾರೆ. ಇತ್ತೀಚೆಗೆ ಕೊರೋನಾ ಸೋಂಕಿಗೆ ತುತ್ತಾಗಿ ಸಚಿನ್ ತೆಂಡೂಲ್ಕರ್ ಗುಣಮುಖರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com