ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ: ಟೀಂ ಇಂಡಿಯಾ ಹೋಗುತ್ತಾ? ಪಾಕ್ ಗೆ ಶಾಕ್ ಕೊಡುತ್ತಾ ಕೇಂದ್ರ ಸರ್ಕಾರ!

ಪಾಕಿಸ್ತಾನದಲ್ಲಿ 2025ರಲ್ಲಿ ನಡೆಯಲಿರುವ ಚಾಂಪಿಯನ್ ಟ್ರೋಫಿ ಮೇಲೆ ಕಾರ್ಮೋಡ ಕವಿದಂತಾಗಿದೆ. ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಅಂತಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಪಾಕ್ ತಂಡ-ಅನುರಾಗ್ ಠಾಕೂರ್
ಪಾಕ್ ತಂಡ-ಅನುರಾಗ್ ಠಾಕೂರ್

ನವದೆಹಲಿ: ಪಾಕಿಸ್ತಾನದಲ್ಲಿ 2025ರಲ್ಲಿ ನಡೆಯಲಿರುವ ಚಾಂಪಿಯನ್ ಟ್ರೋಫಿ ಮೇಲೆ ಕಾರ್ಮೋಡ ಕವಿದಂತಾಗಿದೆ. ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಅಂತಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಯುಎಇನಲ್ಲಿ ನಡೆಯುತ್ತಾ ಚಾಂಪಿಯನ್ಸ್ ಟ್ರೋಫಿ?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, "ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವ ಮುನ್ನ ಭಾರತ ಸರ್ಕಾರ ಮತ್ತು ಕ್ರೀಡಾ ಸಚಿವಾಲಯ ಒಟ್ಟಾಗಿ ನಿರ್ಧಾರ ಕೈಗೊಳ್ಳಲಿದೆ" ಅನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಆಟಗಾರರ ಸುರಕ್ಷತೆಯ ವಿಷಯವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದಾರೆ.

ಮುಂದಿನ 8 ವರ್ಷಗಳ (2024-2031) ಕ್ರಿಕೆಟ್ ಪಂದ್ಯಾವಳಿಯನ್ನು ಐಸಿಸಿ ಮಂಗಳವಾರ ಪ್ರಕಟಿಸಿದೆ. 2024 ರಿಂದ 2031 ರವರೆಗೆ ಪ್ರತಿ ವರ್ಷ ಕೆಲವು ಟೂರ್ನಾಮೆಂಟ್ ಗಳನ್ನು ಐಸಿಸಿ ಆಯೋಜನೆ ಮಾಡಲಿದೆ. ಇದರಲ್ಲಿ ಪ್ರಮುಖವಾಗಿ 2025ರ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನು ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಹಿಸಿದೆ.

ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಠಾಕೂರ್, "ಸಮಯ ಬಂದಾಗ ಭಾರತ ಸರ್ಕಾರ ಮತ್ತು ಗೃಹ ಸಚಿವಾಲಯವು ನಿರ್ಧಾರ ತೆಗೆದುಕೊಳ್ಳುತ್ತದೆ. ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಎಲ್ಲಾ ಅಂಶಗಳನ್ನು ನೋಡಿಕೊಳ್ಳಲಾಗುತ್ತದೆ. ಇದುವರೆಗೆ ಅನೇಕ ದೇಶಗಳು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿವೆ. ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಅನೇಕ ಪಂದ್ಯಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಟಗಾರರ ಭದ್ರತಾ ದೃಷ್ಟಿ ಅತಿ ಮುಖ್ಯವಾಗಿರುವುದರಿಂದ ಈ ಕ್ರಮ ಅಗತ್ಯ ಅನ್ನೋ ಮಾತನ್ನು ಠಾಕೂರ್ ತಿಳಿಸಿದರು.

ಟ್ರೋಫಿ ನಡೆಸಲು ಹರಸಾಹಸ ಪಡುತ್ತಿರುವ ಪಾಕಿಸ್ತಾನ!
2017 ರಲ್ಲಿ ಐಸಿಸಿ ಟ್ರೋಫಿ ಗೆದ್ದ ಪಾಕಿಸ್ತಾನ, ತಮ್ಮ ದೇಶದಲ್ಲೇ ಟ್ರೋಫಿ ನಡೆಸಲು ಪ್ರಯತ್ನ ನಡೆಸುತ್ತಿದೆ. ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಲಿದ್ದು, 15 ಪಂದ್ಯಗಳು ನಡೆಯಲಿವೆ. ಆದರೆ ಆಟಗಾರರ ರಕ್ಷಣೆ ದೃಷ್ಟಿಯಿಂದ ಭಾರತ ಸರ್ಕಾರ ಪ್ರಶ್ನೆ ಎತ್ತಿದರೆ ಯುಎಇನಲ್ಲಿ ಪಂದ್ಯಾವಳಿ ಆಯೋಜನೆಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಬಾರಿ ಭಾರತದಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್ ಯುಎಇನಲ್ಲಿ ನಡೆದಂತೆ ಪಾಕ್ ನಲ್ಲಿ ನಡೆಯಬೇಕಿದ್ದ ಚಾಂಪಿಯನ್ಸ್ ಟ್ರೋಫಿ ಯುಎಇಗೆ ಶಿಫ್ಟ್ ಆಗುವ ಸಾಧ್ಯತೆ ಇದೆ.

ಅಲ್ಲದೆ, ಭದ್ರತಾ ಕಾರಣಗಳಿಂದಾಗಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಪಾಕಿಸ್ತಾನದಲ್ಲಿ ಆಡಲು ಈಗಾಗಲೇ ನಿರಾಕರಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನವು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಬೇಕಾಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com