Source : PTI
ನವದೆಹಲಿ: ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ಎದುರು ಭಾರತ ಸೋಲಿಗೆ ಶರಣಾದ ನಂತರ ಆನ್ ಲೈನ್ ನಲ್ಲಿ ನೆಟ್ಟಿಗರಿಂದ ಅವಾಚ್ಯ ಶಬ್ದಗಳಿಂದ ನಿಂದನೆಗೆ ಒಳಗಾದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಆಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಮೊಹಮ್ಮದ್ ಶಮಿ 3.5 ಓವರ್ ಗಳಲ್ಲಿ 43 ರನ್ ನೀಡುವ ಮೂಲಕ ಟೀಂ ಇಂಡಿಯಾ ಪಾಲಿಗೆ ದುಬಾರಿಯಾಗಿ ಪರಿಣಮಿಸಿದರು. ಇದರಿಂದಾಗಿ ಟಿ-20 ವಿಶ್ವಕಪ್ ನಲ್ಲಿ ಭಾರತ 10 ವಿಕೆಟ್ ಗಳಿಂದ ಸೋಲಿಗೆ ಶರಣಾಗಿತ್ತು.
ಇದನ್ನೂ ಓದಿ: ಟಿ-20 ವಿಶ್ವಕಪ್ ನಲ್ಲಿ ಭಾರತ ವಿರುದ್ಧ ಗೆಲುವು ಇಸ್ಲಾಂಗೆ ಸಂದ ಜಯ: ಪಾಕ್ ಸಚಿವನ ಹೇಳಿಕೆಯ ವಿಡಿಯೋ ವೈರಲ್
ಮೊಹಮ್ಮದ್ ಶಮಿ ಕುರಿತು ಆನ್ ಲೈನ್ ನಲ್ಲಿ ನಿಂದನೆ ಆಘಾತಕಾರಿಯಾಗಿದ್ದು, ಅವರ ಬೆಂಬಲಕ್ಕೆ ನಾವಿದ್ದೇವೆ. ಅವರೊಬ್ಬ ಚಾಂಪಿಯನ್ ಆಟಗಾರನಾಗಿದ್ದು, ಭಾರತದ ಕ್ಯಾಪ್ ಧರಿಸುವ ಪ್ರತಿಯೊಬ್ಬ ಆಟಗಾರನೂ ನೆಟ್ಟಿಗರಿಗಿಂತ ಹೆಚ್ಚು ಭಾರತದ ಅಭಿಮಾನವನ್ನು ಹೊಂದಿದ್ದಾರೆ. ನಾವು ನಿಮ್ಮೊಂದಿಗೆ ಇದ್ದೇವೆ. ಮುಂದಿನ ಪಂದ್ಯದಲ್ಲಿ ಸಾಬೀತುಪಡಿಸಿ ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಹರ್ಭಜನ್ ಸಿಂಗ್, ಮಾಜಿ ವೇಗಿ ಆರ್. ಪಿ. ಸಿಂಗ್, ಹಾಲಿ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮತ್ತಿತರರು ಮೊಹಮ್ಮದ್ ಶಮಿ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ.