ಟಿ-20 ವಿಶ್ವಕಪ್ ನಂತರ ಕೊಹ್ಲಿ ಸೀಮಿತ ಓವರ್ ಗಳ ತಂಡದ ನಾಯಕತ್ವ ತೊರೆಯುವ ಸಾಧ್ಯತೆ
ನವದೆಹಲಿ: ದುಬೈನಲ್ಲಿ ಅಕ್ಟೋಬರ್- ನವೆಂಬರ್ ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಸೀಮಿತ ಓವರ್ ಗಳ ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿರುವುದಾಗಿ ಸೋಮವಾರ ವರದಿಯಾಗಿದೆ.
ರೋಹಿತ್ ಶರ್ಮಾ ಜವಾಬ್ದಾರಿ ತೆಗೆದುಕೊಳ್ಳಲು ಹಾದಿ ಸುಗಮಗೊಳಿಸುವ ನಿಟ್ಟಿನಲ್ಲಿ ಅಕ್ಟೋಬರ್- ನವೆಂಬರ್ ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಂತರ ಏಕದಿನ ಹಾಗೂ ಟಿ-20 ಪಂದ್ಯಗಳಿಗೆ ಟೀಂ ಇಂಡಿಯಾ ನಾಯಕತ್ವವನ್ನು ಕೊಹ್ಲಿ ತೊರೆಯುವ ಸಾಧ್ಯತೆ ನಿಚ್ಚಳ ಎನ್ನಲಾಗುತ್ತಿದೆ.
ರೋಹಿತ್ ಶರ್ಮಾ ಅವರಿಗೆ ನಾಯಕತ್ವ ಜವಾಬ್ದಾರಿ ಹಂಚಿಕೊಳ್ಳಲು ಮುಂದಾಗಿದ್ದಾರೆ. ಬ್ಯಾಟಿಂಗ್ ನಲ್ಲಿ ಗಮನ ಕೇಂದ್ರಿಕರಿಸುವ ಅಗತ್ಯತೆ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಅವರೇ ಸ್ವಯಂ ಪ್ರೇರಣೆಯಿಂದ ಘೋಷಣೆ ಮಾಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ನಾಯಕತ್ವ ವಿಚಾರವಾಗಿ ಕಳೆದ ಕೆಲ ತಿಂಗಳುಗಳಿಂದ ರೋಹಿತ್ ಶರ್ಮಾ ಹಾಗೂ ಟೀಂ ಮ್ಯಾನೇಜ್ ಮೆಂಟ್ ಜೊತೆಗೆ ಕೊಹ್ಲಿ ಧೀರ್ಘ ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ. ಮುಂದಿನ ವರ್ಷ ನಡೆಯಲಿರುವ ಟಿ-20 ಹಾಗೂ 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ತಮ್ಮ ಬ್ಯಾಟಿಂಗ್ ಅಗತ್ಯತೆ ಬಗ್ಗೆ ಕೊಹ್ಲಿ ಮನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ