ವಿರಾಟ್ ಕೊಹ್ಲಿಯ ಹೋಟೆಲ್ ರೂಮ್ ವಿಡಿಯೋ ಲೀಕ್; ಅನುಷ್ಕಾ ಕೆಂಡಾಮಂಡಲ!
ಪರ್ತ್: ಕ್ರಿಕೆಟಿಗ ವಿರಾಟ್ ಕೊಹ್ಲಿ ಹೊಟೇಲ್ ರೂಮ್ ನ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದ್ದು, ವೀಡಿಯೋ ಬಹಿರಂಗಗೊಳಿಸಿದ ಅಭಿಮಾನಿಯ ವಿರುದ್ಧ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೆಂಡಾಮಂಡಲರಾಗಿದ್ದಾರೆ.
ಈ ಬಗ್ಗೆ ಬಾಲಿವುಡ್ ಮಂದಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಟಿ20 ವಿಶ್ವಕಪ್ ಗಾಗಿ ಆಸ್ಟ್ರೇಲಿಯಾದಲ್ಲಿದ್ದು ತಮ್ಮ ಹೋಟೆಲ್ ಕೊಠಡಿಯಲ್ಲಿ ತಮ್ಮ ಏಕಾಂತಕ್ಕೆ ಭಂಗ ಉಂಟುಮಾಡಿದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಸಹ ಅಭಿಮಾನಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ತಮ್ಮ ಅನುಪಸ್ಥಿತಿಯಲ್ಲಿ ಅಭಿಮಾನಿಯೋರ್ವ ತಮ್ಮ ಹೋಟೆಲ್ ಕೊಠಡಿಯ ವೀಡಿಯೋವನ್ನು ಬಹಿರಂಗಗೊಳಿಸಿದ್ದನ್ನು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ವಿಡಿಯೋ ಹಂಚಿಕೊಂಡು ಈ ಬಗ್ಗೆ ಮಾತನಾಡಿದ್ದ ಕೊಹ್ಲಿ ಈ ಘಟನೆ ತಮ್ಮ ಏಕಾಂತಕ್ಕೆ ಧಕ್ಕೆ ಉಂಟಾಗುವ ಭಯ ಕಾಡುತ್ತಿದೆ ಎಂದು ಹೇಳಿದ್ದರು. ಈ ಘಟನೆ ಬಗ್ಗೆ ಅನುಷ್ಕಾ ಶರ್ಮಾ ಸಹ ಪ್ರತಿಕ್ರಿಯೆ ನೀಡಿದ್ದು, ಈ ಕೃತ್ಯ ಎಸಗಿದ್ದ ಅಭಿಮಾನಿಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದು, ಮಾನವ ಹಕ್ಕು ಉಲ್ಲಂಘನೆ ಎಂದು ಹೇಳಿದ್ದಾರೆ.
ಅಭಿಮಾನಿಗಳು ಸಹಾನುಭೂತಿ ತೋರದ ಅನೇಕ ಘಟನೆಗಳನ್ನು ಹಿಂದೆಯೂ ಅನುಭವಿಸಿದ್ದೇನೆ. ಆದರೆ ಇದು ಅತ್ಯಂತ ಕೆಟ್ಟ ಬೆಳವಣಿಗೆ, ಮನುಷ್ಯನ ಏಕಾಂತದ ಉಲ್ಲಂಘನೆಯಾಗಿದ್ದು ಸೆಲಬ್ರಿಟಿಯಾಗಿದ್ದವರು ಇಂತಹ ಸನ್ನಿವೇಶಗಳೊಂದಿಗೆ ವ್ಯವಹರಿಸಬೇಕೆಂದುಕೊಳ್ಳುವವರೂ ಸಹ ಸಮಸ್ಯೆಯ ಭಾಗವೇ ಆಗಿರುತ್ತಾರೆ. ಇದು ನಿಮ್ಮ ಮಲಗುವ ಕೊಠಡಿಯಲ್ಲಿ ನಡೆಯುತ್ತಿದೆ ಎಂದಾದರೆ ಮಿತಿ ಎಲ್ಲಿದೆ? ಎಂದು ಅನುಷ್ಕಾ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ