ಟೀಂ ಇಂಡಿಯಾಗೆ ಹಿನ್ನಡೆ: ಗಾಯದ ಸಮಸ್ಯೆ ಕಾರಣ ಏಷ್ಯಾ ಕಪ್‌ನಿಂದ ಹೊರಗುಳಿದ ಜಸ್ ಪ್ರೀತ್ ಬುಮ್ರಾ!
ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ಏಷ್ಯಾ ಕಪ್ ಟಿ20 ಟೂರ್ನಿಯಿಂದ ಹೊರಗುಳಿದಿದ್ದು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಸಂಕಷ್ಟ ಎದುರಾಗಿದೆ.
ಬುಮ್ರಾ ಬೆನ್ನುನೋವು ಸಮಸ್ಯೆಯಿಂದ ಬಳಲುತ್ತಿದ್ದು ಅವರು ಗುಣವಾಗಲು ಮತ್ತಷ್ಟು ಸಮಯ ಬೇಕಾಗುತ್ತದೆ. ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ಗಾಗಿ ಟೀಂ ಇಂಡಿಯಾವನ್ನು ಸೋಮವಾರ ಆಯ್ಕೆ ಮಾಡಲಾಗುವುದು. ಆದರೆ ಅಧಿಕೃತ ಪ್ರಕಟಣೆ ದಿನ ಏನು ಸಂಭವಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
'ಜಸ್ಪ್ರೀತ್ ಬುಮ್ರಾ ಬೆನ್ನುನೋವಿಗೆ ಒಳಗಾಗಿದ್ದು ಏಷ್ಯಾ ಕಪ್‌ನಲ್ಲಿ ಆಡುವುದಿಲ್ಲ. ಅವರು ನಮ್ಮ ಪ್ರಮುಖ ಬೌಲರ್ ಆಗಿದ್ದು ಟಿ20 ವಿಶ್ವಕಪ್‌ಗೆ ಮೊದಲು ಗುಣಮುಖರಾಗಲಿ ಎಂದು ನಾವು ಬಯಸುತ್ತೇವೆ. ಏಷ್ಯಾ ಕಪ್‌ನಲ್ಲಿ ನಾವು ಅವರನ್ನು ಅಪಾಯಕ್ಕೆ ಸಿಲುಕಿಸುವುದಕ್ಕೆ ಇಚ್ಛಿಸುವುದಿಲ್ಲ. ಅವರನ್ನು ಆಯ್ಕೆ ಮಾಡಿದರೆ ಗಾಯವು ಉಲ್ಬಣಗೊಳ್ಳಬಹುದು ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಹಾಗೂ ಜಿಂಬಾಬ್ವೆ ವಿರುದ್ಧದ ಮುಂಬರುವ ಸರಣಿಯಿಂದ ವಿಶ್ರಾಂತಿ ಪಡೆಯುವ ಮೊದಲು ಬುಮ್ರಾ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ