IND vs BAN: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದಲೂ ಹೊರಬಿದ್ದ ರೋಹಿತ್ ಶರ್ಮಾ
ನವದೆಹಲಿ: ಎಡಗೈ ಹೆಬ್ಬೆರಳಿನ ಗಾಯದಿಂದಾಗಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಡಿಸೆಂಬರ್ 22ರಿಂದ ಮೀರ್‌ಪುರದಲ್ಲಿ ನಡೆಯಲಿರುವ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಕ್ರಿಕ್‌ಬಜ್‌ನಲ್ಲಿನ ವರದಿ ಪ್ರಕಾರ, ಮಿರ್‌ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಹೆಬ್ಬೆರಳಿಗೆ ಗಾಯವಾದ ನಂತರ ರೋಹಿತ್ ಶರ್ಮಾ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ 2ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲೂ ರೋಹಿತ್ ಶರ್ಮಾ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
ಗಾಯದಿಂದಾಗಿ ರೋಹಿತ್ ಢಾಕಾಗೆ ಪ್ರಯಾಣಿಸದ ಕಾರಣ, ಕೆ.ಎಲ್. ರಾಹುಲ್, ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.
ಭಾನುವಾರ (ಡಿಸೆಂಬರ್ 18) ದಂದು ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ 188 ರನ್‌ಗಳಿಂದ ಗೆದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ರೋಹಿತ್ ಶರ್ಮಾರ ಹೆಬ್ಬೆರಳಿನ ಗಾಯ ಸಂಪೂರ್ಣವಾಗಿ ವಾಸಿಯಾಗಿಲ್ಲ ಮತ್ತು ಸ್ವಲ್ಪ ಬಿಗಿತದಿಂದ ಕೂಡಿದೆ ಎಂಬ ಹಿನ್ನೆಲೆಯಲ್ಲೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಅಲಭ್ಯತೆಯ ಬಗ್ಗೆ ಸೋಮವಾರ ತಿಳಿದುಬಂದಿದೆ.
ಭಾರತ ತಂಡದ ಮುಂದಿರುವ ಪ್ರಮುಖ ಯೋಜನೆಗಳನ್ನು ಪರಿಗಣಿಸಿರುವ ಬಿಸಿಸಿಐ ಆಯ್ಕೆ ಸಮಿತಿ ಮತ್ತು ತಂಡದ ಆಡಳಿತವು ಈ ಹಂತದಲ್ಲಿ ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ ಹಾಗೂ ಶುಭ್ಮನ್ ಗಿಲ್ ಶತಕ ಸಿಡಿಸಿ ಮಿಂಚಿದ್ದಾರೆ. ಪೂಜಾರ ಶತಕ ಸಿಡಿಸುತ್ತಿದ್ದಂತೆಯೇ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಆ ಮೂಲಕ, ಬಾಂಗ್ಲಾ ದೇಶವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 513 ರನ್ ಗಳಿಸಬೇಕಿದೆ.
'ರೋಹಿತ್ ಶರ್ಮಾ ಬಗ್ಗೆ ನಾವು ಮುಂದಿನ ಒಂದು ಅಥವಾ ಎರಡು ದಿನದಲ್ಲಿ ತಿಳಿಯುತ್ತೇವೆ. ಸದ್ಯ ಅವರ ಗಾಯದ ಸ್ಥಿತಿಯ ಬಗ್ಗೆಯೂ ನನಗೆ ಅರಿವಿಲ್ಲ. ಟೆಸ್ಟ್ ಪಂದ್ಯದ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಿದ್ದೆ' ಎಂದು ಕೆ.ಎಲ್ ರಾಹುಲ್ ಪಂದ್ಯದ ನಂತರ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ