ನ್ಯೂಜಿಲೆಂಡ್ ಗೆ ಆಘಾತ; ಭಾರತ ವಿರುದ್ಧ 3ನೇ ಟಿ20 ಪಂದ್ಯದಿಂದ ನಾಯಕ ಕೇನ್‌ ವಿಲಿಯಮ್ಸನ್ ಔಟ್‌!

ಭಾರತದ ವಿರುದ್ಧ ಟಿ20 ಸರಣಿಯನ್ನಾಡುತ್ತಿರುವ ನ್ಯೂಜಿಲೆಂಡ್ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ನಾಯಕ ಕೇನ್ ವಿಲಿಯಮ್ಸನ್ 3ನೇ ಟಿ20 ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನೇಪಿಯರ್‌: ಭಾರತದ ವಿರುದ್ಧ ಟಿ20 ಸರಣಿಯನ್ನಾಡುತ್ತಿರುವ ನ್ಯೂಜಿಲೆಂಡ್ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ನಾಯಕ ಕೇನ್ ವಿಲಿಯಮ್ಸನ್ 3ನೇ ಟಿ20 ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ವೈದ್ಯರನ್ನು ಭೇಟಿಯಾಗುತ್ತಿರುವ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್ ಅವರು ಭಾರತ ವಿರುದ್ಧ ಮಂಗಳವಾರ ನಡೆಯಲಿರುವ ಮೂರನೇ ಹಾಗೂ ಟಿ20 ಸರಣಿಯ ಅಂತಿಮ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎರಡನೇ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಆತಿಥೇಯರಿಗೆ ಭಾರಿ ಹಿನ್ನಡೆಯಾಗಿದೆ. ಈ ಕುರಿತು ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ಆಡಳಿತ ಮಂಡಳಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, "ವೈದ್ಯರನ್ನು ಭೇಟಿಯಾಗುತ್ತಿರುವ ಕಾರಣ ಬ್ಲ್ಯಾಕ್‌ಕ್ಯಾಪ್ಸ್‌ ನಾಯಕ ಕೇನ್‌ ವಿಲಿಯಮ್ಸನ್‌ ಅವರು ಮಂಗಳವಾರ ನೇಪಿಯರ್‌ನಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ," ಎಂದು ಹೇಳಿದೆ. 

"ವೈದ್ಯರನ್ನು ಭೇಟಿಯಾಗಲು ಕೇನ್‌ ವಿಲಿಯಮ್ಸನ್ ಅವರು ಹಿಂದೆಯೇ ದಿನಾಂಕ ನಿಗದಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಅನಿವಾರ್ಯವಾಗಿ ಮೂರನೇ ಟಿ20 ಪಂದ್ಯದ ದಿನ ವೈದ್ಯರನ್ನು ಭೇಟಿಯಾಗಬೇಕಿದೆ. ಹೀಗಾಗಿ ಮೂರನೇ ಹಾಗೂ ಟಿ20 ಸರಣಿಯ ಕೊನೆಯ ಪಂದ್ಯಕ್ಕೆ ಅವರು ಅಲಭ್ಯರಾಗುತ್ತಿದ್ದಾರೆ," ಎಂದು ನ್ಯೂಜಿಲೆಂಡ್‌ ಕೋಚ್‌ ತಿಳಿಸಿದ್ದಾರೆ.

ವಿಲಿಯಮ್ಸನ್ ಬದಲಿಗೆ ಚಾಪ್ಮನ್ ಗೆ ಸ್ಥಾನ
ಕೇನ್‌ ವಿಲಿಯಮ್ಸನ್‌ ಅಲಭ್ಯತೆಯಿಂದಾಗಿ ಭಾರತ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಹಿರಿಯ ವೇಗಿ ಟಿಮ್‌ ಸೌಥೀ ನ್ಯೂಜಿಲೆಂಡ್‌ ತಂಡವನ್ನು ಮುನ್ನಡೆಸಲಿದ್ದಾರೆ. ಮತ್ತೊಂದೆಡೆ ಮಂಗಳವಾರದ ಪಂದ್ಯದ ನಿಮಿತ್ತ ಕೇನ್‌ ವಿಲಿಯಮ್ಸನ್‌ ಅವರ ಸ್ಥಾನಕ್ಕೆ ಮಾರ್ಕ್‌ ಚಾಂಪ್ಮನ್‌ ಕಿವೀಸ್‌ ಟಿ20 ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಅಂದಹಾಗೆ ಶುಕ್ರವಾರದಿಂದ ಭಾರತ ವಿರುದ್ಧ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿ ನಿಮಿತ್ತ ಕೇನ್‌ ವಿಲಿಯಮ್ಸನ್‌ ಬುಧವಾರ ನ್ಯೂಜಿಲೆಂಡ್‌ ತಂಡಕ್ಕೆ ಮರಳಲಿದ್ದಾರೆ. ಕೇನ್ ವಿಲಿಯಮ್ಸನ್ ಅವರ ಮೊಣಕೈ ಗಾಯದ ನಿಮಿತ್ತ ಅವರು ವೈದ್ಯರನ್ನು ಭೇಟಿಯಾಗುತ್ತಿಲ್ಲ. ಅವರಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಕಿವೀಸ್‌ ಕೋಚ್‌ ಗ್ಯಾರಿ ಸ್ಟೀಡ್‌ ಸ್ಪಷ್ಟಪಡಿಸಿದ್ದಾರೆ.

ಅಂತೆಯೇ "ಮಾರ್ಕ್‌ ಚಾಂಪ್ಮನ್‌ ಗುಣಮಟ್ಟದ ಆಟಗಾರನಾಗಿರುವ ಹಿನ್ನೆಲೆಯಲ್ಲಿ ತಂಡದ ಪ್ಲೇಯಿಂಗ್‌ ಇಲೆವೆನ್‌ಗೆ ಮೌಲ್ಯವನ್ನು ತಂದುಕೊಡಲಿದ್ದಾರೆ. ಇನ್ನು ಕೇನ್‌ ವಿಲಿಯಮ್ಸನ್ ಅವರ ಅನುಪಸ್ಥಿತಿಯಲ್ಲಿ ಭಾರತ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಹಿರಿಯ ವೇಗಿ ಟಿಮ್‌ ಸೌಥೀ ಮುನ್ನಡೆಸಲಿದ್ದಾರೆ," ಎಂದು ಗ್ಯಾರಿ ಸ್ಟೀಡ್‌ ತಿಳಿಸಿದ್ದಾರೆ. ಇನ್ನು ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಮೊದಲನೇ ಟಿ20 ಪಂದ್ಯ ಮಳೆಯಿಂದ ಟಾಸ್‌ ಕಾಣದೆ ರದ್ದಾಗಿತ್ತು. ಬಳಿಕ ಮೌಂಟ್‌ ಮೌಗಾನುಯ್‌ನಲ್ಲಿ ಭಾನುವಾರ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿದ್ದ ಭಾರತ ತಂಡ, 65 ರನ್‌ಗಳ ಭರ್ಜರಿ ಗೆಲುವು ಪಡೆದಿತ್ತು. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com